ಬೀದರ್: ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ನಿಷೇಧಾಜ್ಞೆ ಯಥಾವತ್ತಾಗಿ ಜಾರಿಯಾಗಲಿ. ಈ ವೇಳೆಯಲ್ಲಿ ಜನರ ಮೇಲೆ ಲಾಠಿ ಬೀಸೋದು ಬೇಡ. ಬೇಕಿದ್ದರೆ ಕೇಸ್ ದಾಖಲಿಸಿ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯ ಔರಾದ್, ಭಾಲ್ಕಿ, ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲೂಕಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ತಾಲೂಕು ಮಟ್ಟದ ಅಧಿಕಾರಿಗಳ ಪ್ರತ್ಯೇಕ ತಂಡಗಳ ರಚನೆ ಮಾಡುವಂತೆ ಆಯಾ ತಹಶೀಲ್ದಾರ್‌ಗೆ ಸೂಚನೆ ನೀಡಿದರು.
ಕೊರೊನಾ ಪಾಸಿಟಿವ್ ಆದ ಸೋಂಕಿತರ ಆರೈಕೆ, ಬೆಡ್, ಚುಚ್ಚುಮದ್ದು ನಿರ್ವಹಣೆ, ಆಕ್ಸಿಜನ್ ವ್ಯವಸ್ಥೆ, ನಿಷೇಧಾಜ್ಞೆ ಜಾರಿ ತಂಡ, ಸಾಮಾಜಿಕ ಅಂತರ ಕಾಪಾಡುವ ತಂಡ, ಮಾಸ್ಕ್ ಧರಿಸದೆ ಇರುವ ಜನರ ಮೇಲೆ ದಂಡ ವಿಧಿಸುವ ತಂಡ ಹೀಗೆ ಪ್ರತಿ ತಾಲೂಕಿನಲ್ಲಿ ತಂಡಗಳ ರಚನೆ ಮಾಡುವಂತೆ ಹೇಳಿದರು.
ಜಿಲ್ಲೆಯ ವಿವಿಧ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಚಿವರು ಆಸ್ಪತ್ರೆಗಳಲ್ಲಿ ರೋಗಿಗಳನ್ನು ಮಾತನಾಡಿಸಿ ಕೊರೊನಾ ವಿರುದ್ಧ ಹೋರಾಟ ಸಾಮೂಹಿಕವಾಗಿರಲಿ ಎಂದರು. ಡಿಎಚ್.ಒ ಡಾ.ವಿ.ಜಿ.ರೆಡ್ಡಿ ಜೊತೆಯಲ್ಲಿದ್ದರು.