ಬಸವಕಲ್ಯಾಣ (ಬೀದರ್): ಮುಂಬರುವ ಕೆಲವೇ ದಿನಗಳಲ್ಲಿ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆ ಪೂರ್ವ ಸಿದ್ಧತೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನ. 24ರಂದು ಮಂಗಳವಾರ ನಗರಕ್ಕೆ ಆಗಮಿಸುತ್ತಿದ್ದು, ಬ್ಲಾಕ್ ಕಾಂಗ್ರೆಸ್ ಕಮಿಟಿಯಿಂದ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ 12ಕ್ಕೆ ನಗರಕ್ಕೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ ಅವರು ಮೊದಲಿಗೆ ದಿ. ಶಾಸಕ ಬಿ. ನಾರಾಯಣರಾವ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸುವರು. ನಂತರ 12-15ಕ್ಕೆ ಬಂಗ್ಲಾ ಸಮೀಪದ ಎಂ.ಎ. ಬೇಗ್ ಕಲ್ಯಾಣ ಮಂಟಪದಲ್ಲಿ ಉಪ ಚುನಾವಣೆಯ ನಿಮಿತ್ತ ಆಯೋಜಿಸಲಾಗುವ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು ಎಂದು ನಗರದ ಸಾಹಿಲ್ ಕಲ್ಯಾಣ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ರಾಠೊಡ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ್ ಪಾಟೀಲ್, ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಡಾ. ಚಂದ್ರಶೇಖರ ಪಾಟೀಲ, ಅರವಿಂದ ಅರಳಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರ ಜತೆಯಲ್ಲಿ ಜೊತೆಗಿರಲಿದ್ದಾರೆ ಎಂದರು.
ಎಂ.ಎ. ಬೇಗ್ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು, ಚುನಾಯಿತ ಜನ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದು ರಾಠೋಡ ಮನವಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ನಂತರ ಸಭೆ ನಂತರ ಡಿ.ಕೆ. ಶಿವಕುಮಾರ ಅವರು ಪ್ರಥಮ ಬಾರಿಗೆ ನಗರಕ್ಕೆ ಆಗಮಿಸುತ್ತಿದ್ದು, ಸಭೆಯ ನಂತರ ಅನುಭವ ಮಂಟಪ, ಗವಿಮಠ, ಅಂಬೇಡ್ಕರ ಭವನ, ರಾಜಾಬಾಗ ಸವಾರ ದರ್ಗಾ, ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಮಹಾತ್ಮರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಟಿಕೆಟ್ ವಿಷಯ ವರಿಷ್ಠರಿಗೆ ಬಿಟ್ಟಿದ್ದು:
ಉಪ ಚುನಾವಣೆಗೆ ಸ್ಪರ್ಧೆಗಾಗಿ ಪಕ್ಷದ ಟಿಕೆಟ್ ಬಯಸಿ ಈಗಾಗಲೇ 16 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲವಾಗಿದೆ. ಇಲ್ಲಿ ಉಪ ಚುನಾಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಪಕ್ಷದ ಅಭ್ಯರ್ಥಿ ಯಾರು ಎನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ. ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅವರ ನೇತೃತ್ವ, ಶಾಸಕ ರಾಜಶೇಖರ್ ಪಾಟೀಲ್ ಅವರ ಸಂಯೋಜಕತ್ವದಲ್ಲಿ 8 ಜನ ಪ್ರಮುಖರ ಸಮಿತಿ ರಚಿಸಲಾಗಿದ್ದು, ಸಮಿತಿ ಪರಿಶೀಲನೆ ನಡೆಸಿ ವರದಿ ಕಳಿಸಿದ ನಂತರ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ನಗರ ಘಟಕದ ಅಧ್ಯಕ್ಷ ಮೀರ ಅಜರಲಿ ನವರಂಗ, ನಗರ ಸಭೆ ಸದಸ್ಯ ರವೀಂದ್ರ ಬೋರಾಳೆ, ಪ್ರಮುಖರಾದ ದತ್ತಾತ್ರೆಯ ಮೂಲಗೆ, ದಿಲೀಪ ಶಿಂಧೆ, ಅಮಾನತ ಅಲಿ, ಸಂತೋಷ ಗುತ್ತೇದಾರ, ಅಫ್ಸ್ರ ಮಿಯಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.