ಬೀದರ್: ಸಕಾಲಕ್ಕೆ ಮಳೆಯಾಗಿ ಹಚ್ಚ ಹಸಿರಿನಿಂದ ಕಂಗೊಳಿಸುವ ಮುಂಗಾರು ಹಂಗಾಮಿನ ಬೆಳೆಗಳಿಗೆ ಜಿಂಕೆಗಳು ಕಾಟ ಕೊಡುತ್ತಿವೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ, ಮಮದಾಪೂರ್, ಉಡಬಾಳ, ನಿಟ್ಟೂರ್, ಕಮಲನಗರ ತಾಲೂಕಿನ ಡೊಣಗಾಂವ್, ಬೆಳಕೊಣಿ, ದಾಬಕಾ, ಮುರ್ಕಿ, ಹುಲ್ಯಾಳ, ಔರಾದ್ ತಾಲೂಕಿನ ಚಟನಳ್ಳಿ, ಜಿರ್ಗಾ, ಜೋಜನಾ, ಕಪ್ಪಿಕೇರಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜಿಂಕೆಗಳ ಹಿಂಡು ಅನ್ನದಾತನ ನಿದ್ದೆಗೆಡಿಸಿವೆ.
ಜಿಲ್ಲೆಯಲ್ಲಿ ಕಾದಿಟ್ಟ ಅರಣ್ಯ ಪ್ರದೇಶದ ಕೊರತೆಯಿಂದಾಗಿ ಆಹಾರ ಅರಸಿ ಬರುವ ಜಿಂಕೆಗಳ ಹಿಂಡು ಸಾಮೂಹಿಕವಾಗಿ ರೈತರ ಗದ್ದೆಗಳಲ್ಲಿ ಓಡಾಡುವುದಲ್ಲದೆ, ಚಿಗುರು ಸಸಿಗಳನ್ನು ತಿನ್ನುತ್ತಿವೆ. ಇದರ ಪರಿಣಾಮ ಕಷ್ಟಪಟ್ಟು ಬೆಳೆ ಬೆಳೆದ ರೈತ ಸಂಕಷ್ಟಕ್ಕೀಡಾಗಿದ್ದಾನೆ.
ಜಿಂಕೆ ಧಾಮ ಸ್ಥಾಪನೆಗೆ ಬೇಡಿಕೆ:
ಕಳೆದ ದಶಕಗಳಿಂದ ಜಿಲ್ಲೆಯಲ್ಲಿ ಜಿಂಕೆಗಳ ಸಂತತಿ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಜಿಂಕೆ ಧಾಮ ಸ್ಥಾಪನೆಯಾಗಬೇಕು ಎಂದು ಪ್ರಾಣಿ ದಯಾ ಸಂಘದ ಮಲ್ಲೇಶ ಗಣಪೂರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಿಂಕೆಗಳು ರಸ್ತೆಯಲ್ಲಿ ಬಂದು ವಾಹನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪುತ್ತಿವೆ. ಈಗ ಅವುಗಳು ರೈತರ ಗದ್ದೆಗಳಿಗೆ ನುಗ್ಗುತ್ತಿವೆ. ಈ ನಿಟ್ಟಿನಲ್ಲಿ ಜಿಂಕೆಗಳ ಸಂತತಿ ಹೆಚ್ಚಿರುವ ಜಿಲ್ಲೆಯಲ್ಲಿ ಜಿಂಕೆ ಧಾಮ ಸ್ಥಾಪನೆ ಮಾಡುವ ಮೂಲಕ ಪ್ರವಾಸಿಗರನ್ನು ಸೆಳೆಯಬಹುದು. ರೈತರ ಸಮಸ್ಯೆಗೂ ಪರಿಹಾರ ನೀಡಬಹುದು ಎಂದು ಮಲ್ಲೇಶ್ ಗಣಪೂರ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.