ಬೀದರ್: ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಿದ್ದ ಜಿಲ್ಲೆಯ ಜನತೆ ಈ ಬಾರಿ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ನಗರದ ನೆಹರೂ ಕ್ರೀಡಾಂಗಣ ಸಮೀಪದ ರೋಟರಿ ವೃತ್ತ, ಮೋಹನ್ ಮಾರ್ಕೆಟ್, ಅಂಬೇಡ್ಕರ್ ವೃತ್ತ, ರಸ್ತೆ ಬದಿಯಲ್ಲಿ ಅನೇಕ ಅಂಗಡಿಗಳು ತೆರೆದುಕೊಂಡಿದ್ದು ಹೂವು, ಹಣ್ಣು, ಪಟಾಕಿ, ಪೂಜಾ ಸಾಮಗ್ರಿ ಖರೀದಿ ಜೋರಾಗಿದೆ.
ಹಬ್ಬವನ್ನು ಸಂಭ್ರಮಿಸಲು ಜನರು ಗೂಡುದೀಪ, ಮಣ್ಣಿನಿಂದ ಮಾಡಿದ ಹಣತೆಗಳ ಜೊತೆಗೆ ಹಬ್ಬಕ್ಕೆ ಅಗತ್ಯವಿರುವ ಸಾಮಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದರು. ಮೋಹನ್ ಮಾರ್ಕೆಟ್, ಅಂಬೇಡ್ಕರ್ ವೃತ್ತ, ಮಡಿವಾಳ ವೃತ್ತ,ಜೊತೆಗೆ ಇಲ್ಲಿನ ಅಂಗಡಿಗಳಲ್ಲಿ ತೂಗು ಹಾಕಿರುವ ಬಣ್ಣದ ಆಕಾಶ ಬುಟ್ಟಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ನಾಳೆ ಅಮಾವಾಸ್ಯೆ. ಜೊತೆಗೆ ಸೂರ್ಯಗ್ರಹಣ ಇರುವುದರಿಂದ ಅನೇಕರು ತಮ್ಮ ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಇಂದು ಲಕ್ಷ್ಮಿ ಪೂಜೆ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಹಣ್ಣುಗಳ ಬೆಲೆಯಲ್ಲಿ ಸುಮಾರು 20 ರೂ.ಯಿಂದ 50 ರೂ. ಹೆಚ್ಚಾಗಿದ್ದು, ಕಬ್ಬು, ಚೆಂಡು ಹೂವು ಹಾಗೂ ಹಣ್ಣಿನ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ನಗರದ ಸಾಯಿ ಆದರ್ಶ ಶಾಲೆಯ ಮೈದಾನದಲ್ಲಿ 30ಕ್ಕೂ ಅಧಿಕ ಪಟಾಕಿ ಅಂಗಡಿಗಳನ್ನು ತೆರೆಯಲಾಗಿದೆ. ಪಟಾಕಿಗಳ ಬೆಲೆ ಈ ಬಾರಿ ಶೇ 40ರಷ್ಟು ಹೆಚ್ಚಾಗಿದೆ. ಮಕ್ಕಳು ಸಿಡಿಸುವ ಪಟಾಕಿಗಳಿಗೆ ಬೇಡಿಕೆ ಹೆಚ್ಚಿದ್ದು, ಬೆಲೆ ಹೆಚ್ಚಿದ್ದರೂ ಮಕ್ಕಳನ್ನು ಖುಷಿ ಪಡಿಸಲು ಪಾಲಕರು ಪಟಾಕಿಗಳನ್ನು ಖರೀದಿಸುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು ಕರಾವಳಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ದೀಪಾವಳಿ ಸಂಭ್ರಮಾಚರಣೆ -ವಿಡಿಯೋ