ಬಸವಕಲ್ಯಾಣ: ಬೀದರ್‌ನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಪೊಲೀಸ್ ಮುಖ್ಯ ಪೇದೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ತಾಲೂಕಿನ ಮಂಠಾಳ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತಿದ್ದ ಕುಶಾಲರಾವ ಸುವರ್ಣಕರ್ (59) ಮೃತಪಟ್ಟವರು. ಮೂಲತಃ ಬೀದರ್ ತಾಲೂಕಿನ ಅಷ್ಟೂರ ಗ್ರಾಮದ ನಿವಾಸಿಯಾಗಿದ್ದ ಇವರು, ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2 ತಿಂಗಳ ಹಿಂದೆ ಇಲ್ಲಿಯ ಮಂಠಾಳ ಠಾಣೆಗೆ ವರ್ಗಾವಣೆಗೊಂಡು ಬಂದಿದ್ದ ಇವರಿಗೆ ಕಳೆದ 6ರಂದು ಬೀದರ್‌ನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪರಿಸರದಲ್ಲಿ ಎದೆನೋವು ಕಾಣಿಸಿಕೊಂಡಿತ್ತು.
ಈ ಹಿನ್ನೆಲೆ ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ನ ಮಲ್ಲರಡ್ಡಿ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತಾದರೂ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.