ಬೀದರ್: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ರೈತರ ಬೆಳೆಗಳು ಮಣ್ಣುಪಾಲಾಗಿದ್ದು, ಸಂಕಷ್ಟದಲ್ಲಿರುವ ರೈತರ ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರು ಸ್ಪಷ್ಟಪಡಿಸಿದ್ದಾರೆ.
‘ಸತತ ಮಳೆಯಿಂದ ನೆಲಕಚ್ಚಿದ ಮುಂಗಾರು ಹಂಗಾಮಿನ ಬೆಳೆಗಳು’ ಎಂಬ ವರದಿಯನ್ನು ಈಟಿವಿ ಭಾರತ ಪ್ರಸಾರ ಮಾಡಿದ ಪ್ರತ್ಯಕ್ಷ ವರದಿಗೆ ಪ್ರತಿಕ್ರಿಯಿಸಿದ ಅವರು ಜಿಲ್ಲೆಯಾದ್ಯಂತ ರೈತರ ಮುಂಗಾರು ಹಂಗಾಮಿನ ಬೆಳೆಗಳು ಮಳೆಗೆ ಹಾನಿಯಾಗಿರುವುದು ಈಟಿವಿ ಭಾರತದ ವರದಿಯಿಂದ ಗೊತ್ತಾಗಿದೆ. ಈಗಾಗಲೆ ಸರ್ವೆ ಕಾರ್ಯ ಕೂಡ ಪ್ರಗತಿಯಲ್ಲಿದ್ದು, ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸಮಗ್ರ ಮಾಹಿತಿ ಕಲೆಹಾಕಲು ಸಂಬಂಧಪಟ್ಟ ಇಲಾಖೆಗೆ ಸೂಚಿಸುವುದಾಗಿ ಹೇಳಿದ್ದಾರೆ.
![ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆ](https://etvbharatimages.akamaized.net/etvbharat/prod-images/kn-bdr-07-21-etvbharatimpact-7203280-av-01_21082020211856_2108f_1598024936_1080.jpg)
ಈಗಾಗಲೆ ರೈತರು ಆ್ಯಪ್ ಮೂಲಕ ತಮ್ಮ ಬೆಳೆ ಹಾನಿಯ ಫೋಟೋಗಳನ್ನು ಅಪ್ಲೋಡ್ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಸಾಕಷ್ಟು ಜನ ರೈತರು ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಆದರು ಕೆಲ ರೈತರು ಹೆಸರು, ಉದ್ದು ಬೆಳೆಗಳಿಗೆ ವಿಮೆ ಮಾಡಿಸಿಲ್ಲ ಎನ್ನುವುದಾದರೆ ವರದಿಯನ್ನು ಸಿದ್ಧಪಡಿಸಿ ಸಂಕಷ್ಟದಲ್ಲಿರುವ ರೈತರ ಸಹಾಯಕ್ಕಾಗಿ ಅಗತ್ಯ ಕ್ರಮಗಳನ್ನು ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಜಿಲ್ಲೆಯಲ್ಲಿ ಆಗಸ್ಟ್ 14 ರಿಂದ 20 ರವರೆಗೆ 44 ಮಿಲಿ ಮೀಟರ್ ಮಳೆಯಾಗಿದೆ. ವಾಡಿಕೆಗಿಂತ ಶೇ.84 ರಷ್ಟು ಮಳೆ ಹೆಚ್ಚಾದ ಪರಿಣಾಮ ರೈತರ ಬೆಳೆಗಳು ಹಾನಿಯಾಗಿರುವ ಪ್ರಾಥಮಿಕ ವರದಿ ಬಂದಿದೆ. ಜಿಲ್ಲೆಯಲ್ಲಿ 11,000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 1,500 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 1,500 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 4,000 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್, 75 ಹೆಕ್ಟೇರ್ ಪ್ರದೇಶದಲ್ಲಿ ಎಳ್ಳು ಬೆಳೆದಿದ್ದು, ಮಳೆಯಿಂದಾಗಿ ಬೆಳೆಗೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ. ಈಗಾಗಲೆ ಬೆಳೆ ಸಮೀಕ್ಷೆ ಕುರಿತು ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದ್ದು ಅಂತಿಮ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ರವಾನಿಸಲಾಗುವುದು ಎಂದಿದ್ದಾರೆ.
![ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆ](https://etvbharatimages.akamaized.net/etvbharat/prod-images/kn-bdr-07-21-etvbharatimpact-7203280-av-01_21082020211856_2108f_1598024936_698.jpg)
ಅಲ್ಲದೆ ರೈತರು ಸ್ಥಳೀಯವಾಗಿ ಇರುವ ಮೊಬೈಲ್ ಸೌಲಭ್ಯಗಳನ್ನು ಬಳಸಿಕೊಂಡು ಸಮೀಕ್ಷೆ ಮಾಡಿಸಿಕೊಳ್ಳಬಹುದು. ಈ ಬೆಳೆ ಸಮೀಕ್ಷೆ ಕಾರ್ಯ ಸಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದ್ದು, ರೈತರು ಸಮೀಕ್ಷೆ ಆ್ಯಪ್ ಬಳಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.