ಬೀದರ್: ಒಂದು ವರ್ಷದ ಹಿಂದೆಯಷ್ಟೇ ನಿರ್ಮಾಣ ಮಾಡಿದ ರಸ್ತೆ ಮಧ್ಯೆ ಗುಂಡಿ ನಿರ್ಮಾಣವಾಗಿ ವೈಕುಂಠಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ದಿನಕ್ಕೊಂದು ಅಪಘಾತ ಸಂಭವಿಸಿ ಸವಾರರು ಆಸ್ಪತ್ರೆ ಸೇರುತ್ತಿದ್ದಾರೆ. ಅಂತೆಯೇ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಡಾವರಗಾಂವ್-ಬರ್ದಾಪೂರ್ ರಸ್ತೆಯನ್ನು ಒಂದು ವರ್ಷದ ಹಿಂದೆಯಷ್ಟೇ ನಬಾರ್ಡ್ ಅಡಿಯಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ರಸ್ತೆ ನಿರ್ಮಾಣ ಮಾಡಿದ ಒಂದು ವರ್ಷದಲ್ಲಿ ಕಳಪೆ ಕಾಮಗಾರಿ ಬಯಲಾಗಿದೆ.
ಡಾವರಗಾಂವ್ದಿಂದ ಬರ್ದಾಪೂರ್ಗೆ ಹೋಗುವಾಗ ಹೊಸ ರಸ್ತೆಯ ನಡುವೆ ಗುಂಡಿ ಬಿದ್ದಿದೆ. ಈ ತಗ್ಗು ರಸ್ತೆಯ ಒಂದು ಭಾಗದಲ್ಲಿ ಬಿದ್ದಿದ್ದು ಹಲವು ಬೈಕ್ ಸವಾರರು ಅತೀ ವೇಗದಲ್ಲಿದ್ದಾಗ ಅಚಾನಕ್ಕಾಗಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆಗಳು ಜರುಗಿವೆ. ಹೀಗಾಗಿ ಜನರ ಜೀವಕ್ಕೆ ಕುತ್ತು ತಂದಿರುವ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ನಿರ್ವಹಣೆ ಮಾಡಬೇಕಿದ್ದ ಸಂಬಂಧಿತರು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.