ಬೀದರ್: ಹಿಂದಿ ಸಿನಿಮಾ ಗೀತೆಗಳಿಗೆ ಅರೆಬರೆ ದಿರಿಸು ಧರಿಸಿ ಮೈಮಾಟ ಪ್ರದರ್ಶಿಸಿ ಯುವತಿಯರು ಡ್ಯಾನ್ಸ್ ಮಾಡ್ತಿದ್ರೆ ಪಡ್ಡೆ ಹುಡುಗರು ಉತ್ಸಾಹಕ್ಕೆ ಅಲ್ಲಿ ಎಲ್ಲೆ ಇರಲಿಲ್ಲ. ಅವರು ತಾವೂ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಬೀದರ್ನ ಕಮಲ ನಗರ ತಾಲೂಕಿನಲ್ಲಿ ಜಾತ್ರೆ ನೆಪದಲ್ಲಿ ಐಟಂ ಡಾನ್ಸ್ ಆಯೋಜಿಸಲಾಗಿತ್ತು.
ಜಿಲ್ಲೆಯ ಕಮಲನಗರ ತಾಲೂಕಿನ ದಾಬಕಾ ಗ್ರಾಮದಲ್ಲಿ ಕಳೆದೊಂದು ವಾರದಿಂದ ಯುವತಿಯರಿಂದ ಲೈವ್ ಡ್ಯಾನ್ಸ್ ಶೋ ನಡೆಯುತ್ತಿದೆ. ಅಂಬಾಭವಾನಿ ಮಾತೆಯ ಜಾತ್ರೆ ನಿಮಿತ್ತ ಮಹಾರಾಷ್ಟ್ರದಿಂದ ಲೋಕನಾಟ್ಯ ಕಂಪನಿ ಸದಸ್ಯರನ್ನು ದಾಬಕಾ ಗ್ರಾಮಕ್ಕೆ ಆಹ್ವಾನಿಸಲಾಗಿತ್ತು.
ಮಹಾರಾಷ್ಟ್ರದಿಂದ ಬಂದ ಈ ತಂಡ ಜಿಲ್ಲೆಯ ಗಡಿ ಗ್ರಾಮದಲ್ಲಿಗಿ ಬಿಡಾರ ಹೂಡಿದೆ. ಗ್ರಾಮದಲ್ಲಿ ಟೆಂಟ್ ಹಾಕಿಕೊಂಡಿರುವ ಲೋಕ ನಾಟ್ಯ ತಂಡದ ಸದಸ್ಯರು ಜಾತ್ರೆಗೆ ಬಂದ ಜನರನ್ನು ತಮ್ಮ ಆಕರ್ಷಕ ನೃತ್ಯದ ಮೂಲಕ ರಂಜಿಸುತ್ತಿದ್ದಾರೆ. ಮಧ್ಯರಾತ್ರಿವರೆಗೆ ನಡೆಯುವ ಡ್ಯಾನ್ಸ್ ನೋಡಲು ಜನರು ಕಿಕ್ಕಿರಿದು ತುಂಬಿಕೊಂಡಿದ್ದು, ಅಲ್ಲಿಂದಲೇ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮದ ವಿಡಿಯೋಗಳನ್ನು ವೈರಲ್ ಮಾಡಲಾಗ್ತಿದೆ.
ದಿನಕ್ಕೆ ಐದಾರು ಯುವತಿಯರನ್ನು ಕರೆಯಿಸಿ ವೇದಿಕೆಯಲ್ಲಿ ಕುಣಿಸಿ ಹಣ ಸಂಪಾದನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕ ಜಾಗೃತಿ ಹಾಗೂ ಸಂಸ್ಕೃತಿ ಉಳಿಸುವ ಮೂಲಕ ರಂಗಭೂಮಿ ಕಲೆಗಳ ಅನಾವರಣ ಮಾಡಬೇಕಿದ್ದು ಈ ರೀತಿಯ ನೃತ್ಯ ಕಾರ್ಯಕ್ರಮಗಳು ಆಕ್ಷೇಪಾರ್ಹ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಜೋರಾಗಿ ಕೇಳಿಬಂದಿವೆ.