ಬಸವಕಲ್ಯಾಣ: ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ 2ನೇ ಅಲೆ ಆರಂಭವಾಗಿದ್ದು, ಗಡಿ ಜಿಲ್ಲೆ ಬೀದರ್‌ನಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಡಿಕೊಳ್ಳಲಾಗುತ್ತಿದೆ.
ಮಾಹಾರಾಷ್ಟ್ರದ ಎರಡು ಜಿಲ್ಲೆಯಲ್ಲಿ ಹೊಸ ರೂಪಾಂತರ ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲೂಕಿನ ಚಂಡಕಾಪೂರ ಬಳಿಯ ಗಡಿಯಲ್ಲಿ ಭಾನುವಾರ ಸಂಜೆ ತಪಸಣಾ ಕೇಂದ್ರ ಆರಂಭಿಸಲಾಗಿದ್ದು, ಪ್ರತಿಯೊಬ್ಬರ ಮೇಲೂ ನಿಗಾ ವಹಿಸಲಾಗಿದೆ.
ಹೆದ್ದಾರಿ ಮೇಲೆ ಬ್ಯಾರಿಕೇಡ್ ಅಳವಡಿಸಿ ರಾಜ್ಯಕ್ಕೆ ಆಗಮಿಸುವ ಪ್ರತಿಯೊಂದು ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಪಾಸಣಾ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಸುಮಾರು 200 ಜನರ ತಪಾಸಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದ ಗಡಿಯಿಂದ ಬರುವರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪ್ರಮಾಣಪತ್ರ ತರದವರಿಗೆ ಥರ್ಮಲ್ ಸ್ಕ್ರೀನಿಂಗ್, ಪಲ್ಸ್ ಆಕ್ಸಿಮೀಟರ್‌ನಿಂದ ತಪಾಸಣೆ ಮಾಡಲಾಗುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಪ್ರವೀಣ ಹೂಗಾರ ಸ್ಥಳದಲ್ಲಿದ್ದು, ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮಂಠಾಳ ಸಿಪಿಐ ಮಹೇಶಗೌಡ ಪಾಟೀಲ್ ಹಾಗೂ ಪಿಎಸ್‌ಐ ಜೈಶ್ರೀ ಹೋಡಲ್ ಕೂಡ ಪರಿಶೀಲಿಸುತ್ತಿದ್ದಾರೆ.