ಬಸವಕಲ್ಯಾಣ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮ ಪಂಚಾಯತ್ ಪಿಡಿಒ ಅವ್ಯವಹಾರ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಾ.ಪಂ. ಇಒ ಸೇರಿದಂತೆ ಇಲಾಖೆ ಅಧಿಕಾರಿಗಳು ಮೋರಖಂಡ ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಪಂಚಾಯತ್ ಇಒ. ಮಡೋಳಪ್ಪ ಪಿ.ಎಸ್, ಸಹಾಯಕ ನಿರ್ದೇಶಕ ಜೈಪ್ರಕಾಶ ಚವ್ಹಾಣ, ಉದ್ಯೋಗ ಖಾತರಿ ಯೋಜನೆ ತಾಂತ್ರಿಕ ವಿಭಾದ ಸಹಾಯಕ ಶಿವರಾಜ ಪಾಟೀಲ್ ನೇತೃತ್ವದ ತಂಡ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಆಲಿಸಿತು.
ಅಧಿಕಾರಿಗಳು ಪರಿಶೀಲನೆಗೆ ಆಗಮಿಸಿದ ಸುದ್ದಿ ತಿಳಿದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಗ್ರಾಪಂಗೆ ಆಗಮಿಸಿ, ಪಿಡಿಒ ಅವರ ಅಕ್ರಮ ವ್ಯವಹಾರದ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು.
ಗ್ರಾಪಂ ವ್ಯಾಪ್ತಿಗೆ ಸೇರಿದ ಮೋರಖಂಡಿ, ಚೌಕೆವಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿ ಅನೇಕ ತಿಂಗಳುಗಳು ಕಳೆದರೂ ಬಿಲ್ ಪಾವತಿಗೆ ಕ್ರಮ ಕೈಗೊಂಡಿಲ್ಲ. ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಿದ ಫಲಾನುಭವಿಗಳಿಗೆ ಮನೆ ಲಕ್ಷಾಂತರ ರೂ. ಅವ್ಯವಹಾರ ನಡೆಸಿದ ಪಿಡಿಒ ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಿಂದ ಅಹವಾಲು ಆಲಿಸಿದ ಇಒ ಮಾತನಾಡಿ, ಪಿಡಿಒ ವಿರುದ್ಧ ಕೇಳಿ ಬಂದಿರುವ ದೂರುಗಳನ್ನು ಪರಿಶೀಲಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವು ಎಂದು ಭರವಸೆ ನೀಡಿದರು.