ಬಸವಕಲ್ಯಾಣ: ನಗರದ ವಾರ್ಡ್ ಸಂಖ್ಯೆ 7ರ ವ್ಯಾಪ್ತಿಯ ಧಾರಾಗಿರಿಗಲ್ಲಿ ನಿವಾಸಿ 70 ವರ್ಷದ ವೃದ್ಧರೊಬ್ಬರು ಜೂನ್ 11 ರಂದು ಮೃತಪಟ್ಟಿದ್ದು, ಇಂದು ಬಂದಿರುವ ಇವರ ಕೊರೊನಾ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ಇಲ್ಲಿಯ ರೇಣಾಗಲ್ಲಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ನಂತರ ಉಸಿರಾಟ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣದ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರವು ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಉಮರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ವ್ಯಕ್ತಿಗೆ ಯಾವುದೇ ಸೋಂಕಿತನೊಂದಿಗೆ ಸಂಪರ್ಕವಿಲ್ಲ. ಆದರೂ ಸೋಂಕು ಹೇಗೆ ತಗುಲಿದೆ ಹಾಗೂ ಇವರ ಪ್ರಥಮ ಸಂಪರ್ಕಕ್ಕೆ ಎಷ್ಟು ಜನ ಬಂದಿದ್ದಾರೆ ಎಂಬ ಬಗ್ಗೆ ಆರೋಗ್ಯ ಇಲಾಖೆಯಿಂದ ತನಿಖೆ ನಡೆದಿದೆ.
ಮೃತ ವೃದ್ಧನಿಗೆ ಪತ್ನಿ ಹಾಗೂ ಒಟ್ಟು 8 ಜನ ಪುತ್ರರು ಮೂವರು ಪುತ್ರಿಯರಿದ್ದು, ಪತ್ನಿ, ಓರ್ವ ಪುತ್ರಿ ಹಾಗೂ ನಾಲ್ಕು ಜನ ಪುತ್ರರು ಈತನ ಜೊತೆ ವಾಸವಿದ್ದರು. ಅವರೆಲ್ಲರನ್ನು ಆಸ್ಪತ್ರೆಗೆ ಸಾಗಿಸಿ ಪರೀಕ್ಷೆಗೆ ಒಳಪಡಿಲಾಗಿದ್ದು, ಮುಂಜಾಗೃತ ಕ್ರಮವಾಗಿ ಎಲ್ಲರನ್ನ ಗೃಹ ನಿರ್ಬಂಧಕ್ಕೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತಿದ್ದ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದಲೇ ಈತನಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗುತ್ತಿದೆ.
ತಾಲೂಕಿನಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 188 ಕ್ಕೆ ಏರಿಕೆ ಯಾಗಿದೆ. ಕಳೆದ ಎರಡು ದಿನದಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದೆ ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಇಂದು ಮತ್ತೆ ನಾಲ್ಕು ಜನರಲ್ಲಿ ಸೋಂಕು ದೃಢಪಟ್ಟಿದೆ.
ಬೆಟಬಾಲಕುಂದ ಗ್ರಾಮದ 45 ವರ್ಷದ ವ್ಯಕ್ತಿ, ಬಟಗೇರಾದ 30 ವರ್ಷ ವ್ಯಕ್ತಿ ಹಾಗೂ ಹಾಮುನಗರದ 24 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕು ಪತ್ತೆಯಾದ ಬೆಟಬಾಲಕುಂದಾದ ವ್ಯಕ್ತಿ ಹುಲಸೂರ ರಸ್ತೆಯ ಮಾಲಗುಡಿ ಬಳಿಯ ಹಾಸ್ಟೆಲ್‌ನಲ್ಲಿ ಕಾವಲುಗಾರರಾಗಿದ್ದು, ಈ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಇದ್ದವರಿಗೆ ಊಟ ಬಡಿಸಿದ್ದಾರೆ. ಹೀಗಾಗಿ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಟಗೇರಾದ ವ್ಯಕ್ತಿ ಮುಂಬೈನಿಂದ ಬಂದಿದ್ದು, ಬಂದ ದಿನವೇ ಇಲ್ಲಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಇವರನ್ನು ಬೀದರ್ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿತ್ತು. ಹಾಮುನಗರ ವ್ಯಕ್ತಿಗೂ ಮುಂಬೈ ಸಂಪರ್ಕವಿದೆ ಎಂದು ತಿಳಿದು ಬಂದಿದೆ.