ಬೀದರ್ : ಶಾಲೆ ಆರಂಭವಾದ ನಂತರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ರೇಕುಳಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಒಬ್ಬ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಎರಡು ದಿನಗಳ ಹಿಂದೆ ರೇಕುಳಗಿ ಪ್ರೌಢ ಶಾಲೆಯ 10ನೇ ತರಗತಿಯ 30 ಜನ ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ ಒಬ್ಬ ವಿದ್ಯಾರ್ಥಿಯ ವರದಿಯಲ್ಲಿ ಸೋಂಕು ಪತ್ತೆಯಾಗಿದೆ.
ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನಿರೀಕ್ಷಿತ ಮಳೆ : ಏಕ ಕಾಲಕ್ಕೆ ರೈತರಿಗೆ ಸಂಕಟ-ಸಂತಸ
ಶಾಲೆಯಲ್ಲಿರುವ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಸ್ಯಾಂಪಲ್ ಕೂಡ ಸಂಗ್ರಹಿಸಲಾಗಿದೆ. 10 ಜನ ಶಿಕ್ಷಕರ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದ್ದು, ಶಾಲಾ ಆವರಣವನ್ನು ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಲಾಗಿದೆ. ಸೋಂಕಿತ ವಿದ್ಯಾರ್ಥಿಗೆ ಬೀದರ್ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಹೆಚ್‌ಒ ಡಾ.ವಿ ಜಿ ರೆಡ್ಡಿ ತಿಳಿಸಿದ್ದಾರೆ.