ಬಸವಕಲ್ಯಾಣ (ಬೀದರ್): ನಗರದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಕಾಣಿಸಿಕೊಂಡು ನಂತರ ಕಾಣೆಯಾಗಿದ್ದ ಕೊರೊನಾ, ಇದೀಗ ಮತ್ತೆ ತಾಲೂಕಿನ ಗ್ರಾಮವೊಂದರಲ್ಲಿ ಪ್ರತಕ್ಷ್ಯವಾಗುವ ಮೂಲಕ ಗ್ರಾಮೀಣ ಭಾಗದಲ್ಲಿಯೂ ತನ್ನ ಅಟ್ಟಹಾಸ ಮೆರೆಯಲು ಮುಂದಾಗಿದೆ.
ಹೌದು, ನಗರಕ್ಕೆ ಸಮೀಪದಲ್ಲೇ ಇರುವ ತಾಲೂಕಿನ ಧನ್ನೂರ (ಕೆ) ವಾಡಿಯ (36) ವರ್ಷದ ಯುವಕನ್ನೊಬ್ಬನಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಗಾರೆ ಕಾರ್ಮಿಕನಾಗಿರುವ ಯುವಕ ಉದ್ಯೋಗ ಅರಸಿ ಮಹಾರಾಷ್ಟ್ರದ ಮುಂಬೈ ಮಹಾನಗರಕ್ಕೆ ತೆರಳಿ ಗ್ರಾಮಕ್ಕೆ ವಾಪಸ್ ಆಗಿದ್ದ. ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈತನನ್ನು ಚಿಕಿತ್ಸೆಗಾಗಿ ಬೀದರ್ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರಥಮ ಸಂಪರ್ಕಕ್ಕೆ ಬಂದಿದ್ದ ಪತ್ನಿ, ಪುತ್ರ ಹಾಗೂ ಈತನೊಂದಿಗೆ ಮುಂಬೈನಿಂದ ಆಗಮಿಸಿದ ಇನ್ನೋರ್ವ ಯುವಕನನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಇಡಲಾಗಿದೆ.
ಟ್ರಾವೆಲ್ ಹಿಸ್ಟರಿ:
ಕಳೆದ 8 ರಂದು ಮಹಾರಾಷ್ಟ್ರದ ಮುಂಬೈ ಮಹಾನಗರದಿಂದ ಲಾರಿ ಮೂಲಕ ಸಸ್ತಾಪೂರ ಬಂಗ್ಲಾದವರೆಗೆ ಆಗಮಿಸಿ, ಅಲ್ಲಿಂದ ಆಟೋ ಮೂಲಕ ಗ್ರಾಮಕ್ಕೆ ತಲುಪಿದ್ದಾನೆ.
ಎಲ್ಲೆಡೆ ಓಡಾಟ:
ಮುಂಬೈನಿಂದ ಮೇ.8ರಂದು ಗ್ರಾಮಕ್ಕೆ ಆಗಮಿಸಿದ ಈತ ಗೃಹ ಬಂಧನದಲ್ಲಿ ಇರದೇ 4 ದಿನಗಳ ಕಾಲ ಧನ್ನೂರು ವಾಡಿ ಸೇರಿದಂತೆ ಪಕ್ಕದ ಧನ್ನೂರು ಗ್ರಾಮದ ಪುನರ ವಸತಿ ಕೇಂದ್ರದಲ್ಲಿಯೂ ತನ್ನ ಅನೇಕ ಗೆಳೆಯರೊಂದಿಗೆ ಬೆರೆತು ಸಾಮಾನ್ಯರಂತೆ ಓಡಾಡಿದ್ದಾನೆ. ಗ್ರಾಮದ ಹೋಟೆಲ್, ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿ, ಗ್ರಾಮದಲ್ಲಿ ಅಕ್ರಮವಾಗಿ ನಡೆಯುವ ಮದ್ಯ ಮಾರಾಟ ಮಳಿಗೆಗೂ ತೆರಳಿ ಮದ್ಯ ಸೇವಿಸಿದ್ದಾನೆ.
ಮುಂಬೈನಿಂದ ಆಗಮಿಸಿದ ಕಾರಣ ಈತನನ್ನು 12 ರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿಯೂ ಕೂಡ ಪ್ರತ್ಯೇಕವಾಗಿರದೇ ಕ್ವಾರಂಟೈನ್ ಕೇಂದ್ರದಲ್ಲಿರುವ ಇತರರೊಂದಿಗೆ ಬೆರೆತಿದ್ದ ಎಂದು ಗ್ರಾಮದ ಮೂಲಗಳಿಂದ ತಿಳಿದುಬಂದಿದೆ.
ಗ್ರಾಮದ ಯುವಕನಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಧನ್ನೂರ ವಾಡಿ ಹಾಗೂ ಧನ್ನೂರು ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಈತನೊಂದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿರುವ ಜನರಿಗಾಗಿ ಆರೋಗ್ಯ ಇಲಾಖೆಯಿಂದ ಶೋಧ ನಡೆಸಲಾಗುತ್ತಿದೆ.