ಬೀದರ್: ಒಂದು ವರ್ಷದಿಂದ ಜಿಲ್ಲಾಧಿಕಾರಿ ಕಛೇರಿಗೆ ತಿರುಗುತ್ತಿದ್ದರೂ ತನ್ನ ಕೆಲಸವಾಗುತ್ತಿಲ್ಲ, ಇದರ ಬಗ್ಗೆ ವಿಚಾರಿಸಲು ಬಂದರೆ ಅಲ್ಲಿನ ಅಧಿಕಾರಿಗಳು ನಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬ ಸಚಿವ ಪ್ರಭು ಚವ್ಹಾಣ್ ಎದುರಲ್ಲೇ ಡಿಸಿ ಜೊತೆ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ದೂರು ಪೆಟ್ಟಿಗೆ ಅಳವಡಿಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಲು ನಿಂತಿದ್ದರು. ಈ ವೇಳೆಯಲ್ಲಿ ವ್ಯಕ್ತಿಯೊಬ್ಬ ಒಂದು ವರ್ಷದಿಂದ ನನ್ನ ಕೆಲಸ ಮಾಡ್ತಿಲ್ಲ, ಅರ್ಜಿ ಹಾಕಿದ್ರು ಫೈಲ್ ಡಿಸಿ ಸಾಹೆಬ್ರ ಟೇಬಲ್ ಮೇಲಿದೆ ಎಂದು ಗುಮಾಸ್ತ ಹೇಳ್ತಾರೆ. ಡಿಸಿ ಸಾಹೇಬ್ರಿಗೆ ಕೇಳಿದ್ರೆ ಯಾವುದು ನನ್ನ ಹತ್ತಿರ ಇಲ್ಲ ಅಂತಾರೆ, ನಾವು ಏನು ಮಾಡಬೇಕು ಎಂದು ಸಚಿವರ ಮುಂದೆ ತಮ್ಮ ನೋವನ್ನು ತೋಡಿಕೊಂಡರು. ಇದಕ್ಕೆ ಸಚಿವರು ಇದೇನು ನೋಡಿ ಅಂದ್ರೆ ಡಿಸಿ ಡಾ. ಎಚ್ ಆರ್ ಮಹದೇವ್ ಅವರು ಟೇಬಲ್ ಮೇಲೆ ಕೆಳಗೆ ಗೊತ್ತಿಲ್ಲ, ಒಂದು ಸಿಂಗಲ್ ಫೈಲ್ ಕೂಡ ಪೆಂಡಿಂಗ್ ಇಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಮತ್ತೊಬ್ಬ ವ್ಯಕ್ತಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲ ಸಿಬ್ಬಂಧಿಗಳು ಕಾಡಿಸ್ತಾರೆ. ನಮ್ಮ ಕೆಲಸಗಳು ಆಗ್ತಿಲ್ಲ ಎಂದು ದೂರಿದರು. ಹೀಗೆ ಮಾತು ಮಾತು ಬೆಳೆದು ಡಿಸಿ ಹಾಗೂ ಜನರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸಚಿವ ಚವ್ಹಾಣ ಅವರು ಏನೇ ಇರಲಿ ಇದನ್ನೆಲ್ಲಾ ಬಗೆ ಹರಿಸಿ ಎಂದು ಸಮಾಧಾನ ಮಾಡಿದರು.