ಬಸವಕಲ್ಯಾಣ (ಬೀದರ್): ಸಾಮಾಜಿಕ ಸಮಾನತೆ ತಳಹದಿ ಮೇಲೆ ಜಗತ್ತಿಗೆ ಮೊಟ್ಟ ಮೊದಲಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ವಿಶ್ವದ ಮೊದಲ ಸಂಸತ್ತು ಎನ್ನುವ ಹೆಗ್ಗಳಿಕೆಗೆ ಭಾಜನವಾಗಿರುವ 12ನೇ ಶತಮಾನದ ಅನುಭವ ಮಂಟಪ ಮರು ನಿರ್ಮಾಣ ಮಾಡಬೇಕು ಎನ್ನುವ ನಾಡಿನ ಬಸವಾಭಿಮಾನಿಗಳ ಬಹುದಿನಗಳ ಆಸೆ ಸಾಕಾರ ಗೊಳ್ಳುವ ಕಾಲ ಕೂಡಿ ಬಂದಿದೆ. ರಾಜ್ಯ ಸರ್ಕಾರದಿಂದ 500 ಕೋಟಿ ವೇಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ನೂತನ ಅನುಭವ ಮಂಟಪ ಕಾಮಗಾರಿಗೆ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಗುರು ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ 12ನೇ ಶತಮಾನದ ಅನುಭವ ಮಂಟಪ ಮರು ನಿರ್ಮಾಣವಾಗಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿದ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾಡಿನ ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ ನೇತೃತ್ವದ ತಜ್ಞರ ಸಮಿತಿ ರಚಿಸಿ, ಅನುಭವ ಮಂಟಪ ನಿರ್ಮಾಣಕ್ಕಾಗಿ ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿತ್ತು. ಸರ್ಕಾರದ ಆದೇಶದಂತೆ ಶರಣರ ವಚನಗಳ ಆಧಾರದಲ್ಲಿ 650 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಪಡಿಸಿ ವರದಿ ಸಲ್ಲಿಸಲಾಗಿತ್ತು.
ತಜ್ಞರ ಸಮಿತಿಯಿಂದ ವರದಿ ಸ್ವೀಕರಿಸಿದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಹಾಗೂ ನಂತರದಲ್ಲಿ ಅಧಿಕಾರಕ್ಕೆ ಬಂದಿದ್ದ ಹೆಚ್ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುಭವ ಮಂಟಪ ಯೋಜನೆಗೆ ಅನುದಾನ ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ ಕಾರಣ ಯೋಜನೆಗೆ ಹಿನ್ನೆಡೆಯಾಗಿತ್ತು. ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಆಸಕ್ತಿ ತೊರಿದ್ದಾರೆ. ಗೋ.ರು.ಚ ವರದಿಗೆ ಸಮ್ಮತಿ ಸೂಚಿಸಿ, ಯೋಜನೆ ಅನುಷ್ಠಾನಕ್ಕೆ 5 ಕೋಟಿ ರೂ. ಮಂಜುರು ಮಾಡಿದ್ದಾರೆ. ತಕ್ಷಣ 100 ಕೋಟಿ ರೂ. ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿಯ ಶರಣ ಸ್ಮಾರಕಗಳ ಅಭಿವೃದ್ಧಿಗಾಗಿ ರಚಿಸಲಾಗಿರುವ ಬಿಕೆಡಿಬಿಯಿಂದ ನೂತನ ಅನುಭವ ಮಂಟಪ ಕಾಮಗಾರಿಗೆ ಚಾಲನೆ ನೀಡಲಾಗುತಿದೆ. ನಗರದ ಹೊರ ವಲಯದಲ್ಲಿರುವ ನೂತನ ಅನುಭವ ಮಂಟಪ ಪರಿಸರದಲ್ಲಿಯೇ ರಾಜ್ಯ ಸರ್ಕಾರದಿಂದ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸುಮಾರು 3 ಎಕರೆ ಪ್ರದೇಶದ ವಿಸ್ತಾರದಲ್ಲಿ ತಲೆ ಎತ್ತಲಿರುವ 180 ಅಡಿ ಎತ್ತರದ ನೂತನ ಅನುಭವ ಮಂಟಪಕ್ಕೆ ಮುಖ್ಯಮಂತ್ರಿಗಳ ಹಸ್ತದಿಂದ ಅಡಿಗಲ್ಲು ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಮ್ಮದು ನುಡಿದಂತೆ ನಡೆಯುವ ಸರ್ಕಾರ: ಸಚಿವ
ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರದಿಂದ ನಿರ್ಮಿಸಲಾಗುತ್ತಿರುವ ನೂತನ ಅನುಭವ ಮಂಟಪ ಕಾಮಗಾರಿ ಎರಡು ವರ್ಷಗಳ ಒಳಗಾಗಿ ಪೂರ್ಣಗೊಳಿಸಲಾಗುವುದು. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುಭವ ಮಂಟಪದ ಯೋಜನೆ ಸಿದ್ಧವಾಗಿದ್ರೂ ಬಜೇಟ್‌ನಲ್ಲಿ ಅನುದಾನ ಕಲ್ಪಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಕಾಂಗ್ರೆಸ್‌ನವರು ಬರಿ ಸುಳ್ಳು ಹೇಳುವುದನ್ನೆ ಕಾಯಕಮಾಡಿಕೊಂಡಿದ್ದಾರೆ ಎಂದು ಸಚಿವ ಚವ್ಹಾಣ್ ಛೇಡಿಸಿದರು.