ಧರ್ಮದ ಹೆಸರಲ್ಲಿ ದೇಶ ವಿಭಜಿಸುವ ಹುನ್ನಾರ: ಬಿಜೆಪಿ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ - ದೇಶದ ಜನರನ್ನು ಧರ್ಮದ ಹೆಸರಲ್ಲಿ ವಿಭಜಿಸುವ ಕೆಲಸ
ಬಸವಕಲ್ಯಾಣದಲ್ಲಿ ಮುಸ್ಲಿಂ ವೆಲ್ಫೇರ್ ಸೊಸೈಟಿಯಿಂದ ನಗರದ ಕೋಟೆ ಬಳಿ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಇಬ್ರಾಹಿಂ ವಾಗ್ದಾಳಿ
ಬಸವಕಲ್ಯಾಣ: ಸಿಎಎ, ಎನ್‌ಆರ್‌ಸಿಯಿಂದ ಬರೀ ಮುಸ್ಲಿಮರಿಗಷ್ಟೇ ಅಲ್ಲ, ದಲಿತ, ಹಿಂದುಳಿದ ಸಮುದಾಯ ಸೇರಿ ದೇಶದ ಎಲ್ಲ ಮೂಲ ನಿವಾಸಿಗಳಿಗೂ ಇದರ ಸಮಸ್ಯೆ ತಪ್ಪಿದ್ದಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದರು.
ಸಭೆಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಜನರನ್ನು ಧರ್ಮದ ಹೆಸರಲ್ಲಿ ವಿಭಜಿಸುವ ಕೆಲಸ ನಡೆಯುತ್ತಿದೆ. ವ್ಯಾಪಾರಿಯೊಬ್ಬ ದೇಶದ ರಾಜನಾದ್ರೆ ಪ್ರಜೆಗಳು ಭಿಕ್ಷುಕರಾಗಬೇಕು ಎಂದರು.
ಅಂಬಾನಿ-ಅದಾನಿ ಆದಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಐಐಐಟಿ ಸೇರಿ ಇತರ ಪದವಿಗಳನ್ನು ಪಡೆದ ಪದವೀಧರರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಿಸಬೇಕಿದ್ದ ಪ್ರಧಾನಿ, ಪಾಕ್‌ನ ಚಿಂತೆಯಲ್ಲಿದ್ದಾರೆ ಎಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ನ ದೇಶದಲ್ಲಿ ಜಾರಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಆಂದೋಲನದ ಮಾದರಿ ಹೋರಾಟ ನಡೆಸಲಾಗುವುದು ಎಂದರು.