ಬಸವಕಲ್ಯಾಣ(ಬೀದರ್): ಲಾಕ್ಡೌನ್ ನೆಪದಲ್ಲಿ ಇಲ್ಲಿಯ ತಹಶೀಲ್ದಾರರು ಅಧಿಕಾರ ದುರ್ಬಳಕೆ ಮಾಡುತ್ತಿದ್ದು, ತಹಶೀಲ್ದಾರ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ ಅಮೀರೋದ್ದಿನ್ ಚೌದ್ರಿ ಆಗ್ರಹಿಸಿದ್ದಾರೆ.
ತಹಶೀಲ್ದಾರರು ನ್ಯಾಯಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿರುವ ಮುಸ್ಲಿಂ ಮುಖಂಡ ಚೌದ್ರಿ, ಅವರನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕರೊದಿಗೆ ಧರಣಿ ಕೂರುವುದಾಗಿ ಎಚ್ಚರಿಸಿದ್ದಾರೆ.
ನಗರದ ಚೌದ್ರಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಹಶೀಲ್ದಾರ್ ಅಧಿಕಾರ ದುರ್ಬಳಕೆ ಮಾಡುತ್ತಿದ್ದು, ಮುಸ್ಲಿಂ ಧರ್ಮೀಯರನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಜಾತಿ, ಧರ್ಮದ ಕುರಿತು ತಾರತಮ್ಯ ಮಾಡಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಆದರೆ ಇಲ್ಲಿ ತಹಶೀಲ್ದಾರರು ಮುಸ್ಲಿಮರನ್ನು ಕಂಡರೆ ವಿರೋಧಿಗಳಂತೆ ವರ್ತಿಸುತಿದ್ದಾರೆ ಎಂದು ಆರೋಪಿಸಿದರು.
ತಹಶೀಲ್ದಾರರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದಲ್ಲಿ ಜನರೊಂದಿಗೆ ಸೇರಿ ಧರಣಿ ಕೂರುವುದಾಗಿ ಎಚ್ಚರಿಸಿದ್ದಾರೆ.