ಬಸವಕಲ್ಯಾಣ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಸ್ತಾಪುರ ಗ್ರಾಮದ ಯಲ್ಲಾಲಿಂಗ ಆಶ್ರಮದಲ್ಲಿ ಆಯೋಜಿಸಿದ ಬೀದರ್ ಜಿಲ್ಲಾ ಎಂಟನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಕುಂ.ವೀರಭದ್ರಪ್ಪ ಮಾತನಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಕೇವಲ ಮುಸ್ಲಿಮರಷ್ಟೇ ಅಲ್ಲ, ಈ ದೇಶದ ಅನಕ್ಷರಸ್ಥರು, ಆದಿವಾಸಿಗಳಿಗೂ ಇದರ ಸಮಸ್ಯೆ ತಪ್ಪಿದ್ದಲ್ಲ. ಹುಟ್ಟಿದ ದಿನಾಂಕ ಹಾಗೂ ವಾಸ ಸ್ಥಳದ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಹೀಗಾಗಿ ಇದರಿಂದ ಎಲ್ಲರಿಗೂ ಸಮಸ್ಯೆ ತಪ್ಪಿದ್ದಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮೂಢನಂಬಿಕೆ ಅಂಧಶ್ರದ್ಧೆ ವಿರೋಧಿಸಿದ ಶರಣರ ನಾಡು ನಮ್ಮದು. ಆದರೆ ಈ ದೇಶದಲ್ಲಿ ಇನ್ನು ಮುಂದೆ ಇವುಗಳ ವಿರುದ್ಧ ಮಾತನಾಡಿದರೆ ಜೈಲಿಗೆ ಕಳುಹಿಸುವಂಥ ಕಾಯಿದೆ ಜಾರಿಗೆ ಬರಲಿದೆ. ರಾಷ್ಟ್ರ ಧ್ವಜದ ಬದಲು ಭಗವಧ್ವಜ ಹಿಡಿಯಬೇಕು ಎನ್ನುವ ನಿಯಮ ಹೇರಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರು ಆಗಿರುವ ರಾಜ್ಯ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ: ಸತೀಶಕುಮಾರ ಹೊಸಮನಿ ಸೇರಿದಂತೆ ಪೂಜ್ಯರು, ಪ್ರಮುಖರು, ಸಾಹಿತಿಗಳು ಉಪಸ್ಥಿತರಿದ್ದರು