ಬೀದರ್: ಜಿಲ್ಲೆಯಲ್ಲಿ ಇಂದಿನಿಂದ ಸಾರಿಗೆ ಬಸ್ಗಳ ಓಡಾಟ ಪುನಾರಾರಂಭವಾಗಲಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ತಿಳಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ತಾಲೂಕುಮಟ್ಟದ ಸಂಪರ್ಕ ಕಲ್ಪಿಸುವ ಬಸ್ಗಳ ಓಡಾಟ ಪುನಾರಾರಂಭವಾಗಲಿದೆ. ಜೊತೆಗೆ ಅಂತರ್ ಜಿಲ್ಲೆ ಕಲಬುರಗಿ-ಬೀದರ್ ನಡುವೆಯೂ ಬಸ್ಗಳು ಸಂಚರಿಸಲಿವೆ ಎಂದಿದ್ದಾರೆ.
ವಿಭಾಗದ ಒಟ್ಟು 582 ಬಸ್ಗಳು ಸಾರ್ವಜನಿಕ ಸೇವೆಗಾಗಿ ಸಿದ್ಧವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಒಂದು ಬಸ್ನಲ್ಲಿ ಗರಿಷ್ಠ 30 ಜನರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಬೀದರ್-ಔರಾದ್, ಬೀದರ್-ಭಾಲ್ಕಿ, ಬೀದರ್- ಬಸವಕಲ್ಯಾಣ, ಬೀದರ್ - ಚಿಟಗುಪ್ಪ ಹಾಗೂ ಬೀದರ್- ಕಲಬುರಗಿ ಬಸ್ಗಳು ಸಂಚಾರ ಮಾಡಲಿವೆ. ಆಯಾ ಘಟಕದ ವ್ಯವಸ್ಥಾಪಕರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬಸ್ಗಳು ಒಂದು ಪಾಯಿಂಟ್ನಿಂದ ಬಿಟ್ಟರೆ ನೇರವಾಗಿ ಮತ್ತೊಂದು ಪಾಯಿಂಟ್ಗೆ ಬಂದು ನಿಲ್ಲುತ್ತವೆ. ಮಧ್ಯದಲ್ಲಿ ಎಲ್ಲೂ ನಿಲುಗಡೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಎಕ್ಸ್ಪ್ರೆಸ್ ಮಾರ್ಗಗಳಲ್ಲೂ ಬಸ್ಗಳು ಸಂಚರಿಸುವುದಿಲ್ಲ. ಅಂತರ್ ರಾಜ್ಯ ಸಂಚಾರವೂ ಇರುವುದಿಲ್ಲ. ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.