ಬಸವಕಲ್ಯಾಣ: ಹೊಂಡದ ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರ ಪೈಕಿ ಓರ್ವ ಮೃತಪಟ್ಟು, ಮತ್ತೊಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಉಮ್ಮಾಪೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಜಯ್ ಸೂರ್ಯವಂಶಿ (14) ಮೃತ ಬಾಲಕ. ಸೋಮವಾರ ಮಧ್ಯಾಹ್ನ ನಾಲ್ವರು ಗೆಳೆಯರು ಗ್ರಾಮದಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ನೀರಿನ ಹೊಂಡದಲ್ಲಿ ಈಜಲೆಂದು ತೆರಳಿದ್ದರು. ಅಜಯ್ ಮತ್ತು ಅನಿಕೇತ್ ಎನ್ನುವ ಇಬ್ಬರು ನೀರಿಗೆ ಇಳಿದಿದ್ದಾರೆ. ಈಜುಬಾರದ ಇಬ್ಬರೂ ನೀರಿನಲ್ಲಿ ಒದ್ದಾಡುವುದನ್ನು ಕಂಡ ನವನಾಥ ಮತ್ತು ಬಬಲು ಎಂಬ ಬಾಲಕರು ತಕ್ಷಣ ಜಾಗೃತರಾಗಿ ಅನಿಕೇತನ ಕೈಗೆ ಉದ್ದನೆಯ ಕಟ್ಟಿಗೆ ಕೊಟ್ಟು ಆತನಿಗೆ ರಕ್ಷಣೆ ಮಾಡಿದ್ದಾರೆ. ಆದರೆ ಅಜಯ್ ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿ ಮುಳುಗಿದ್ದರಿಂದ ರಕ್ಷಣೆ ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿದ ಗ್ರಾಮೀಣ ಠಾಣೆ ಪಿಎಸ್ಐ ವಸೀಮ ಪಟೇಲ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತ ಬಾಲಕನ ಶವ ಹೊರ ತೆಗೆದಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.