ಬೀದರ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಯ ಸರ್ಕಾರವಾಗಿವೆ. ರೈತ, ಬಡಜನರ ಪರ ಕಾಳಜಿ ಇರುವ ನಮ್ಮ ಪಕ್ಷಕ್ಕೆ ಮತ ನೀಡುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು.
ಜಿಲ್ಲೆಯ ಬಸವಕಲ್ಯಾಣ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರವಾಗಿ ಬಸವಕಲ್ಯಾಣದ ವಿವಿಧೆಡೆ ನಡೆದ ಲಿಂಗಾಯತ ಮತ್ತು ರೆಡ್ಡಿ ಸಮಾವೇಶ, ಬಹಿರಂಗ ಸಭೆ, ಮಾದಿಗ ಸಮಾಜದ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಬೆಳೆಯುವ ಬೆಳೆಗಳಿಗೆ ಎರಡು ಪಟ್ಟು ಬೆಲೆ ಕೊಡ್ತೀವಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದ್ರೆ ಖರ್ಚು ಜಾಸ್ತಿ ಮಾಡಿದ್ದಾರೆ ಹೊರತು ಬೆಲೆ ಜಾಸ್ತಿ ಮಾಡಿಲ್ಲ.
ಅಲ್ಲದೇ, ರಸಗೊಬ್ಬರಗಳ ಬೆಲೆ, ಡೀಸೆಲ್, ಪೆಟ್ರೋಲ್ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಇದರೊಂದಿಗೆ ಸಾಗಾಣಿಕೆ ವೆಚ್ಚ ಕೂಡ ಜಾಸ್ತಿಯಾಗ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಹೊರ ದೇಶದಲ್ಲಿರುವ ಸಂಪತ್ತು, ಬ್ಲಾಕ್ ಮನಿಯನ್ನು ದೇಶಕ್ಕೆ ತರುತ್ತೇವೆ ಅಂತ ಹೇಳಿದ್ರು. ಎಷ್ಟು ಬ್ಲಾಕ್ ಮನಿ, ಹೊರ ದೇಶಗಳಲ್ಲಿನ ಸಂಪತ್ತನ್ನ ಮರಳಿ ದೇಶಕ್ಕೆ ತಂದಿದ್ದಾರೆ. ತಂದು ಯಾರಿಗೆ ಕೊಟ್ಟಿದ್ದಾರೆಂದು ಪ್ರಶ್ನಿಸಿದರು.
ಅಲ್ಲದೆ ಕಾಂಗ್ರೆಸ್ ನಾಯಕರು ಬಿಜೆಪಿಯಿಂದ 10 ಕೋಟಿ ರೂ. ತೆಗೆದುಕೊಂಡು ನಾನು ಬಸವಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇನೆ ಎಂದು ಆರೋಪಿಸಿದ್ದಾರೆ. ಹಾಗೆ ಏನಾದ್ರು ನಾನು ಮಾಡಿದ್ರೆ ಆ ದೇವರೇ ನನಗೆ ನೋಡಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರು.
ರೈತ ಮಕ್ಕಳ ಪಕ್ಷ ಜೆಡಿಎಸ್ಗೆ ಬಂಬಲ ನೀಡಿ
ನಾವೆಲ್ಲ ರೈತರ ಮಕ್ಕಳು ರೈತರ ಪಕ್ಷವಾದ ಜೆಡಿಎಸ್ಗೆ ಬೆಂಬಲ ನೀಡಬೇಕಾಗಿದೆ. ರೈತರೇ ನಮ್ಮ ದೇಶದ ಬೆನ್ನೆಲುಬು. ರೈತರ ಪರವಾಗಿ ಇರುವ ಪಕ್ಷ ಜೆಡಿಎಸ್ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಜಿಡಿಎಸ್ ಅಧಿಕಾರದಲ್ಲಿದ್ದಾಗೆಲ್ಲ ಹೊಸ ಯೋಜನೆ ಜಾರಿಗೆ ತಂದಿದೆ
ನಿಮ್ಮ ಮುಂದೆ ಮೂರು ಪಕ್ಷಗಳಿದ್ದಾವೆ. ಜಾತ್ಯಾತೀತ ಜನತಾದಳಕ್ಕೆ ಯಾಕೆ ಮತ ನೀಡಬೇಕು ಎಂದರೆ ಯಾವ್ಯಾವಾಗ ಜಾತ್ಯಾತೀತ ಜನತಾದಳ ಪರಿವಾರದ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ ಅವಾಗಲೆಲ್ಲ ಹೊಸ ಹೊಸ ಯೋಜನೆಗಳು, ಯೋಚನೆಗಳು ಪ್ರಾರಂಭವಾಗಿವೆ. ಯಾರಾದರು ಒಬ್ಬ ಮುಖ್ಯಮಂತ್ರಿ ಬಡವರ, ಹರಿಜನ, ಗಿರಿಜನರ ಮನೆಯಲ್ಲಿ ವಾಸ್ತವ್ಯ ಹೂಡಿ, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆಂದರೆ ಅದು ಕುಮಾರಸ್ವಾಮಿರವರು ಎಂದು ಮಾಜಿ ಸಚಿವ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.