ಬಸವಕಲ್ಯಾಣ: ವೇಗವಾಗಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಸಸ್ತಾಪುರ ಗ್ರಾಮದ ಸಮೀಪ ನಡೆದಿದೆ.
ತಾಲೂಕಿನ ಗುಂಡೂರ ಗ್ರಾಮದ ಅಂಬಾದಾಸ ತಿಪ್ಪಣ್ಣಾ ಬಡಿಗೆ (28), ರವಿ ಶಿವಪ್ಪ (42) ಮೃತರು. ಘಟನೆಯಲ್ಲಿ ತ್ರೀವವಾಗಿ ಗಾಯಗೊಂಡಿರುವ ತುಳಸಿರಾಮ ತಿಪ್ಪಣ್ಣ (20) ಎಂಬಾತನನ್ನು ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ನ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಂಗಳವಾರ ಮಧ್ಯ ರಾತ್ರಿ ಒಂದೇ ಬೈಕ್ ಮೇಲೆ ಈ ಮೂವರು ಸಸ್ತಾಪೂರ ಬಂಗ್ಲಾ ಕಡೆಯಿಂದ ಗುಂಡೂರು ಗ್ರಾಮಕ್ಕೆ ತೆರಳುತ್ತಿರುವಾಗ ಸಸ್ತಾಪುರ ಸಮೀಪದ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ ಎನ್ನಲಾಗ್ತಿದೆ.
ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ವಿರುದ್ಧ ಎಫ್‌ಐಆರ್!
ಸುದ್ದಿ ತಿಳಿದ ನಗರ ಠಾಣೆ ಪಿಎಸ್ಐ ಗುರು ಪಾಟೀಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.