ಬೀದರ್: ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಹಗಲಿರುಳೆನ್ನದೆ ನಿದ್ದೆಗೆಟ್ಟು ಎಲ್ಲೆಲ್ಲೋ ಸುತ್ತಾಡುತ್ತಿದ್ದರೂ ಹನಿ ನೀರಿಗೆ ತಾಪತ್ರಯವಾಗಿದೆ.
ಬೆಳಗ್ಗೆ ನೀರು ಹಿಡಿಯಲು ಹೋದರೆ ಸುಡು ಬಿಸಿಲಿನ ತಾಪ. ಅದಕ್ಕಾಗಿ ಸಂಜೆಯಾಗುತ್ತಿದ್ದಂತೆ ನೀರು ಸಿಗುವೆಡೆ ಎಲ್ಲಾ ಬಿಂದಿಗೆ ಹಿಡಿದು ಉದ್ದುದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟಾದರೂ ಒಂದೆರಡು ಬಿಂದಿಗೆ ನೀರು ಸಿಕ್ಕಿದರೆ ಅದೇ ಪುಣ್ಯ ಎನ್ನುವಂತಾಗಿದೆ.
ಔರಾದ್ ಪಟ್ಟಣದ ಧನಗರ ಗಲ್ಲಿ, ಜನತಾ ಕಾಲೋನಿ, ಶೇಟಕಾರ ಗಲ್ಲಿ, ಬಸವನಗಲ್ಲಿ, ಟೀಚರ್ಸ್ ಕಾಲೋನಿ, ಬುಟ್ಟೆ ಗಲ್ಲಿ, ಪಠಾಣ ಗಲ್ಲಿ, ಶರಣಬಸವೇಶ್ವರ ಬಡಾವಣೆ, ಸಂಗಮೇಶ್ವರ ಬಡಾವಣೆ ಸೇರಿ ಹಲವೆಡೆ ಜನರು ನಿದ್ದೆಗೆಟ್ಟು ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ.
ಸಹಬಾಳ್ವೆಯಿಂದ ಬಾಳುತ್ತಿದ್ದ ಮಹಿಳೆಯರು ಇದೀಗ ನೀರಿಗಾಗಿ ನಿತ್ಯ ಕಾದಾಡುತ್ತಿದ್ದಾರೆ. ಸಂಬಂಧಗಳು ಕೂಡ ಹದಗೆಡುತ್ತಿವೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪಟ್ಟಣ ಪಂಚಾಯ್ತಿಯವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.