ಬೀದರ್: ಸ್ವಪಕ್ಷೀಯ ಸದಸ್ಯರೊಂದಿಗೆ ಬಿಜೆಪಿ, ಜೆಡಿಎಸ್ ಸದಸ್ಯ ಬಲದ ಮೂಲಕ ಬಹುಮತದಿಂದ ಜಿಲ್ಲಾ ಪಂಚಾಯತ್ನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿದೆ.
ಜಿ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿಲುವಳಿಗೆ ಅನುಮೋದನೆ ಸಿಕ್ಕಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ ಹಾಗೂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ವಿರುದ್ಧ ಸ್ವ ಪಕ್ಷೀಯ ಸದಸ್ಯರೇ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಬಲದಿಂದ ನಾಲ್ಕು ವರ್ಷ ಆರು ತಿಂಗಳುಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ.
ಒಟ್ಟು 33 ಸದಸ್ಯ ಬಲದ ಜಿಲ್ಲಾ ಪಂಚಾಯತ್ನಲ್ಲಿ 19 ಸದಸ್ಯರ ಬಲದಿಂದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿತ್ತು. ಬಿಜೆಪಿ 11 ಹಾಗೂ ಜೆಡಿಎಸ್ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದ್ರೆ ನಾಲ್ಕು ವರ್ಷ ಆರು ತಿಂಗಳುಗಳ ಕಾಲ ಅಧಿಕಾರದಲ್ಲಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಇಂದು ನಡೆದ ಅವಿಶ್ವಾಸ ಗೊತ್ತುವಳಿಯಲ್ಲಿ ಕಾಂಗ್ರೆಸ್ನ 11 ಜನ, ಬಿಜೆಪಿ 11 ಹಾಗೂ ಜೆಡಿಎಸ್ 2 ಸದಸ್ಯರು ಕೈ ಎತ್ತುವ ಮೂಲಕ ಹಾಲಿ ಅಧ್ಯಕ್ಷ ಗೀತಾ ಪಂಡಿತ ಚಿದ್ರಿ ಹಾಗೂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ.
ಅವಿಶ್ವಾಸಕ್ಕೆ ಕಾರಣವೇನು?
ಕಾಂಗ್ರೆಸ್ ಅಧಿಕಾರದಲ್ಲಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಲಿಲ್ಲ. ಅಧಿಕಾರಕ್ಕೆ ಬಂದಾಗಿನಿಂದಲೂ ಕ್ಷೇತ್ರಗಳ ಅಭಿವೃದ್ಧಿಯಾಗಿಲ್ಲ ಹೀಗಾಗಿ ಮತದಾರರು ಸದಸ್ಯರಿಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಪಕ್ಷಾತೀತವಾಗಿ ಅಭಿವೃದ್ಧಿ ದೃಷ್ಠಿಯಿಂದ ಅವಿಶ್ವಾಸ ಮಂಡಿಸಿದ್ದು ಮುಂದಿನ ಆರು ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವಿಶ್ವಾಸ ಮಾಡಲಾಗಿದ್ದು ಇದು ಜಿಲ್ಲಾ ಪಂಚಾಯತ್ ಸದಸ್ಯರ ಸ್ವಾಭಿಮಾನದ ಗೆಲುವು ಎಂದು ಸದಸ್ಯರು ಹೇಳಿದ್ದಾರೆ.