ಬೀದರ್ : ಶಾಹಿನ್ ಶಿಕ್ಷಣ ಸಂಸ್ಥೆಯ ಪೌರತ್ವ ತಿದ್ದುಪಡಿ ನಾಟಕ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಂಡ್ ಕಂಪನಿ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರುತ್ತಿದೆ ಎಂದು ಸಂಸದ ಭಗವಂತ ಖೂಬಾ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಹಿನ್ ಶಿಕ್ಷಣ ಸಂಸ್ಥೆ ಮೇಲೆ ದೇಶದ್ರೋಹದ ಪ್ರಕರಣ ನಡೆಯುತ್ತಿದೆ. ಈ ವೇಳೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿಪಿಎಂ ನಾಯಕಿ ಬೃಂದಾ ಕಾರಟ್, ಎಎಂಐಎಂನ ಮುಖ್ಯಸ್ಥ ಅಸಾದುದ್ದಿನ್ ಓವೈಸಿ, ಈಶ್ವರ ಖಂಡ್ರೆ ಸೇರಿ ಸಾಲು ಸಾಲು ನಾಯಕರು ಬೀದರ್ ಜಿಲ್ಲಾ ಕಾರಾಗೃಹದಲ್ಲಿದ್ದ ಆರೋಪಿಗಳನ್ನು ಭೇಟಿ ಮಾಡಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಹಲವು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾದವು. ಆಗ ಸೌಜನ್ಯಕ್ಕಾದರೂ ಅವರು ಸಾಂತ್ವನ ಹೇಳಿಲಿಲ್ಲ. ಅವರ ಮನೆಗೆ ಹೋಗಿ ಭೇಟಿ ಕೊಟ್ಟಿಲ್ಲ. ಕೇರಳದಿಂದ ಪಿಎಫ್ಐ, ಎಸ್ಪಿಎಸ್ಡಿ ರಾಜ್ಯಕ್ಕೆ ಬಂದು ಕೃತ್ಯ ಮಾಡಿದ್ರೂ ಸುಮ್ಮನಾಗಿದ್ದರು. ಈಗ ಪೊಲೀಸ್ ಇಲಾಖೆ ಮೇಲೆ ಒತ್ತಡ ತರುತ್ತಿರುವುದಕ್ಕೆ ನಾವು ಖಂಡಿಸುತ್ತೇವೆ ಎಂದರು.
ಶಾಹಿನ್ ಶಿಕ್ಷಣ ಸಂಸ್ಥೆ ಮೇಲೆ ದೇಶದ್ರೋಹದ ಕೇಸ್ ದಾಖಲಿಸಿ ಬೀದರ್ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ. ಅದರ ಪ್ರಕಾರ ಏನು ಮಾಡಬೇಕು ಅದನ್ನು ಮಾಡ್ತಿದ್ದಾರೆ ಎಂದರು.