ಬೀದರ್: ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಮೋಸ ಮಾಡಿಲ್ಲ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಅವರ ಅಪ್ಪನ ಮೇಲೆ ಆಣೆ ಮಾಡಿ ಹೇಳಲಿ ಎಂದು ಸಂಸದ ಭಗವಂತ ಖೂಬಾ ಸವಾಲು ಹಾಕಿದ್ದಾರೆ.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖೂಬಾ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ವಸತಿ ಯೋಜನೆ ಅಡಿ 26000 ಫಲಾನುಭವಿಗಳಿಗೆ ನಕಲಿ ಪ್ರಮಾಣಪತ್ರ ಹಂಚಿಕೆ ಮಾಡಿ ಜನರಿಗೆ ಮೋಸ ಮಾಡಿ ಭಾಲ್ಕಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ದಿಕ್ಕು ತಪ್ಪಿಸಿ ಗೆದ್ದಿದ್ದಾರೆ. ಹಾಗೇನಾದ್ರೂ ಅವರು ಜನರಿಗೆ ಮೋಸ ಮಾಡಿಲ್ಲ ಅಂತ ಅನ್ನೋದಾದ್ರೆ ಅವರಪ್ಪ(ಭೀಮಣ್ಣ ಖಂಡ್ರೆ) ಮೇಲೆ ಆಣೆ ಮಾಡಿ ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾಲ್ಕಿ ತಾಲೂಕಿನಲ್ಲಿ ವಸತಿ ಯೋಜನೆ ಅಡಿಯಲ್ಲಿ ನಡೆದಿರುವ ಅಕ್ರಮದ ತನಿಖೆ ನಡೆಸಿರುವ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ಅಧಿಕಾರಿಗಳು ಶೇ.62 ರಷ್ಟು ಅಕ್ರಮ ನಡೆದಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಜನರಿಗೆ ಮೋಸ ಮಾಡಿದ ಈಶ್ವರ ಖಂಡ್ರೆ ಅವರು ರಾಜಕೀಯ ಜೀವನದಿಂದ ನಿವೃತ್ತಿಯಾಗಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಜನರಿಗೆ ವಂಚನೆ ಮಾಡಿ ಮೊಸ ಮಾಡಿ ರಾಜಕೀಯ ಮಾಡುವ ಈಶ್ವರ ಖಂಡ್ರೆ ಅವರಿಗೆ ರಾಜಕೀಯದಲ್ಲಿ ಮುಂದುವರೆಯಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.