ಬಸವಕಲ್ಯಾಣ: ಗ್ರಾಮದ ರಸ್ತೆಯನ್ನು ಅತಿಕ್ರಮಿಸಿ ಮನೆ ಹಾಗೂ ಕಟ್ಟೆ ನಿರ್ಮಾಣ ಮಾಡಿದ್ದು, ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅತಿಕ್ರಮಣ ಮಾಡಿದ ಕಟ್ಟಡಗಳ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ವಡ್ಡರಗಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭೋಸಗಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ವಡ್ಡರಗಾ ಗ್ರಾಮಸ್ಥರು ತಾಪಂ ಮುಂದೆ ಧರಣಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಾಲೂಕು ಪಂಚಾಯತಿ ಇಒ ಬಿರೇಂದ್ರಸಿಂಗ್ ಠಾಕೂರ ಅವರಿಗೆ ಸಲ್ಲಿಸಿದರು.
ಮುಖಂಡ ರಾವಣ ಕೃಷ್ಣಾಜೀ ಮಾತನಾಡಿ, ಗ್ರಾಮದಲ್ಲಿ ರಸ್ತೆ ಮೇಲೆ ಕೆಲವರು ಮನೆಗಳನ್ನು ನಿರ್ಮಿಸಿದರೆ ಮತ್ತೆ ಕೆಲವರು ಕಟ್ಟೆಗಳನ್ನು ನಿರ್ಮಿಸಿ ರಸ್ತೆ ಅತಿಕ್ರಮಣ ಮಾಡಿದ್ದಾರೆ. ಹೀಗಾಗಿ ಮಕ್ಕಳು, ವೃದ್ಧರು ಸೇರಿದಂತೆ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಕೆಲ ದಿನಗಳ ಹಿಂದೆ ಭೋಸಗಾ ಗ್ರಾಪಂ ಮುಂದೆ ಹಾಗೂ ತಾಪಂ ಕಚೇರಿಯ ಮುಂದೆ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೂ ಇದುವರೆಗೆ ಯಾವುದೇ ಪ್ರಯೋಜನೆಯಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕು. ಸಮಸ್ಯೆ ಪರಿಹರಿಸುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಅಲ್ಲಿವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ತಾಪಂ ಇಒ ಹಾಗೂ ಗ್ರಾಪಂ ಪಿಡಿಒ, ಸಂಬಂಧಿತರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ಬರುವ ಒಂದು ವಾರದ ಒಳಗಾಗಿ ಎಲ್ಲಾ ಅತಿಕ್ರಮಣ ಕಟ್ಟಡ ಹಾಗೂ ಕಟ್ಟೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಧರಣಿ ಕೈಬಿಟ್ಟರು.