ಬೀದರ್: ಕಾರಂಜಾ ಜಲಾಶಯದಲ್ಲಿ ಮುಳುಗಡೆಯಾದ ಸಂತ್ರಸ್ತರಿಗೆ ಸರಿಯಾದ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಕಾರಂಜಾ ಸಂತ್ರಸ್ತರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗಮನ ಹಿನ್ನೆಲೆಯಲ್ಲಿ ಸತತ ನಾಲ್ಕು ತಿಂಗಳಿಂದ ಪ್ರತಿಭಟನಾ ನಿರತ ಸಂತ್ರಸ್ತರೊಂದಿಗೆ ಬಂಡೆಪ್ಪ ಕಾಶೆಂಪೂರ ಸಂಧಾನ ಸಭೆ ನಡೆಸಿದರು. ಈ ವೇಳೆ ಸಂತ್ರಸ್ತರೊಬ್ಬರು ಮಾತನಾಡಿ, ಕಾರಂಜಾ ಜಲಾಶಯದಲ್ಲಿ ನೀರಿಲ್ಲ. ಜನರಿಗೆ ಕುಡಿಯುವುದಕ್ಕೆ ಹನಿ ನೀರು ಸಿಗುತ್ತಿಲ್ಲ. ನಾವು ಪರಿಹಾರ ಕೊಡ್ರಿ ಅಂತ ಹೆಂಡತಿ, ಮಕ್ಕಳು ಎಲ್ಲರೂ ಹೋಗಿ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿಮ್ಮ ಬಳಿ ಹಣ ಇಲ್ಲವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಸಿಎಂ ಕುಮಾರಸ್ವಾಮಿ ಮೊದಲ ಬಾರಿ ಸಭೆ ಮಾಡಿ ನೀಡಿದ ಭರವಸೆ ಹುಸಿಯಾಗಿದೆ. ಈಗ ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಪ್ರತಿಭಟನೆ ಮಾಡುವ ಮೂಲಕ ನಾವು ಅವರನ್ನೇ ಕೇಳುತ್ತೇವೆ ಎಂದು ಎಚ್ಚರಿಕೆ ನೀಡಿದರು.