ಬಸವಕಲ್ಯಾಣ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು, ಪ್ರಮುಖರು ಹಾಗೂ ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಇಲ್ಲಿಯ ಮಿನಿ ವಿಧಾನಸೌಧದ ಬಳಿ ಕೆಲ ಕಾಲ ಪ್ರತಿಭಟನೆ ನಡೆಸಿ, ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸಾವಿತ್ರಿ ಸಲಗರ್ ಅವರಿಗೆ ಸಲ್ಲಿಸಲಾಯಿತು.
ಮಹಾಮಾರಿ ಕೊರೊನಾದಂತಹ ಸಂದಿಗ್ಧ ಸಂದರ್ಭದಲ್ಲಿಯೂ ಅದರ ನಿಯಂತ್ರಣಕ್ಕಾಗಿ ಹಗಲಿರಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 12 ಸಾವಿರ ರೂ. ನಿಗದಿ ಪಡಿಸಬೇಕು ಎಂದು ಒತ್ತಾಯಿಸಿ ಕಳೆದ ಒಂದು ತಿಂಗಳ ಹಿಂದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು.
ಈ ವೇಳೆ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿತ್ತು. ಆದರೆ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 12 ಸಾವಿರ ರೂ. ವೇತನ ಘೋಷಿಸುವ ಜೊತೆಗೆ ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು, ಈಗಾಗಲೆ ಘೋಷಿಸಿದ 3 ಸಾವಿರ ಕೋವಿಡ್ ಪ್ರೋತ್ಸಾಹ ಧನ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಹೇಶ ನಾಡಗೌಡ, ಜಿಲ್ಲಾ ಕಾರ್ಯದರ್ಶಿ ರತ್ನಮ್ಮ ಗಾಯಕವಾಡ, ಉಪಾಧ್ಯಕ್ಷೆ ಮಹಾದೇವಿ ಮೇತ್ರೆ, ತಾಲೂಕು ಅಧ್ಯಕ್ಷೆ ಶಾರದಾ ಮಾದಳೆ, ಪ್ರಮುಖರಾದ ಸುನೀತಾ, ಮಹಾದೇವಿ, ಬಸಮ್ಮಾ, ಪುಷ್ಪಾ ಸೇರಿದಂತೆ ಪ್ರಮುಖರು, ಪದಾಧಿಕಾರಿಗಳು ಈ ವೇಳೆ ಪಾಲ್ಗೊಂಡಿದ್ದರು.