ಬೀದರ್: ಅಕ್ರಮವಾಗಿ ಶ್ರೀಗಂಧ ವ್ಯಾಪಾರ ಮಾಡುತ್ತಿದ್ದ ಜಾಲವೊಂದನ್ನು ಬೇಟೆಯಾಡುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 12 ಲಕ್ಷ ರೂ. ಮೌಲ್ಯದ ಶ್ರೀಗಂಧವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಔರಾದ್ ಪಟ್ಟಣದ ಚನ್ನಬಸವೇಶ್ವರ ಕಾಲೋನಿಯ ಸಂತೋಷ್ ದ್ಯಾಡಂಗಲೆ ಎಂಬಾತ ತನ್ನ ಮನೆಯಲ್ಲಿ 2 ಕ್ವಿಂಟಲ್ ಶ್ರೀಗಂಧವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ನರಸಿಂಗ್ ತುಳಸಿರಾಮ್ ಮಾನೆ, ಸಂತೋಷ್ ದಡ್ಯಾಂಗಲೆ, ಶಿವಕುಮಾರ್ ದಡ್ಯಾಂಗಲೆ ಹಾಗೂ ಅಶೋಕ ರಾಚಪ್ಪ ಹೆಳವಾ ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್. ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದೇವರಾಜ್ ಬಿ, ಸಿಪಿಐ ರಾಘವೇಂದ್ರ ಹಾಗೂ ಸಂತಪೂರ್ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್ಐ ಸುವರ್ಣ ಅವರ ನೇತೃತ್ವದಲ್ಲಿ ಸಿಬ್ಬದಿ ದಾಳಿ ಮಾಡಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.