ಬೀದರ್: ಸ್ವಲ್ಪ ಮಳೆಯಾದ್ರೆ ಸಾಕು ಈ ಅಂಗನವಾಡಿ ಕೇಂದ್ರದ ಅಂಗಳ ಅಕ್ಷರಶಃ ಕೆರೆಯಂತಾಗಿ ಕೇಂದ್ರಕ್ಕೆ ಬರುವ ಪುಟ್ಟ ಕಂದಮ್ಮಗಳು ಹರ ಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಔರಾದ್ ತಾಲೂಕಿನ ಮಹರಾಜವಾಡಿ ಗ್ರಾಮದ ಶಿಶು ಅಭಿವೃದ್ಧಿ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಅಂಗನವಾಡಿ ಕೇಂದ್ರದ ಮುಂದೆ ಚರಂಡಿ ನೀರು ಶೇಖರಣೆಯಾಗಿದೆ. ಅಲ್ಲದೇ ಮಳೆ ನೀರು ಹೆಚ್ಚಾಗಿ ಕೇಂದ್ರದ ಮುಂದೆ ಈಜುಕೋಳವಾಗಿ ಮಾರ್ಪಟ್ಟಿದೆ.
ಕೇಂದ್ರಕ್ಕೆ ಬರುವ ೫ ವರ್ಷದೊಳಗಿನ ಮಕ್ಕಳು ಈ ಹೊಂಡದ ನೀರಿನಿಂದ ಪಾರು ಮಾಡಿಯೆ ಹೊಗಬೇಕು. ನೀರಿನಲ್ಲಿ ಕಾಲಿಟ್ಟು ಅದನ್ನು ದಾಟಲು ಪುಟ್ಟ ಕಂದಮ್ಮಗಳು ಹರಸಾಹಸ ಪಡುವ ಅಮಾನವೀಯ ಘಟನೆ ನಿರಂತರವಾಗಿ ನಡೆಯುತ್ತಿದೆ.
ಪ್ರತಿ ವರ್ಷ ಮಳೆಗಾಲ ಆರಂಭವಾದಾಗೆಲ್ಲ ಸ್ವಲ್ಪ ಮಳೆಯಾದರೂ ಸಾಕು, ಕೇಂದ್ರ ಜಲಾವೃತಗೊಂಡು ಮಕ್ಕಳು ಕಷ್ಟಪಡಬೇಕಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.