ಬೀದರ್: ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವಲ್ಲಿ ಆಸಕ್ತಿ ತೋರದೆ ಸಾಕಷ್ಟು ಯಡವಟ್ಟುಗಳಾಗಿ ಸೋಂಕಿತರ ಸಾವಿನ ನಂತರ ಅಂತ್ಯಕ್ರಿಯೆಗೆ ಹಿಂದೇಟು ಹಾಕುವಂತಾಗಿದೆ. ಆದರೆ ಇಲ್ಲೊಬ್ಬ ಸಮಾಜ ಸೇವಕ ಸೋಂಕಿನಿಂದ ಸಾವನ್ನ ಪ್ಪಿರುವವರ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ಮಾಡುವ ಮೂಲಕ ಮುಕ್ತಿ ಹೇಳುವ ಸಮಾಜಮುಖಿ ಕೆಲಸ ಮಾಡ್ತಿದ್ದಾರೆ.
ಅಖಂಡ ಕರ್ನಾಟಕ ರಕ್ಷಣಾ ಸೇವಾ ಸಮಿತಿ ಸಂಘಟನೆ ಮುಖಂಡರು ಆಗಿರುವ ಮಹಮ್ಮದ್ ಮಾಜಿದ್ ಬಿಲಾಲ್ ತಮ್ಮ ತಂಡ ಕಟ್ಟಿಕೊಂಡು ಕೊರೊನಾ ಸೋಂಕಿನಿಂದ ಸಾವನಪ್ಪಿರುವ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಅನುಮತಿ ಪಡೆದುಕೊಂಡು ಕೊವಿಡ್-19 ಸೋಂಕಿನಿಂದ ಮೃತಪಟ್ಟ ನಾಲ್ವರ ಶವಗಳನ್ನು ಸ್ಮಶಾನ ಭೂಮಿಯಲ್ಲಿ ಆಯಾ ಧರ್ಮಗಳ ವಿಧಿಯಂತೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಿದ್ದು 52 ಜನರು ಇಲ್ಲಿಯವರೆಗೆ ಬಲಿಯಾಗಿದ್ದಾರೆ. ಈ ವೇಳೆಯಲ್ಲಿ ಮೃತರ ಕುಟುಂಬಸ್ಥರು, ಸಂಬಂಧಿಕರು ಸೋಂಕಿತರ ವ್ಯಕ್ತಿಯ ಮೃತ ದೇಹ ಮುಟ್ಟಲು ಮುಂದೆ ಬರದಂತಹ ಸ್ಥಿತಿ ನಿರ್ಮಾಣವಾದಾಗ ಮಾಜಿದ್ ಬಿಲಾಲ್ ಅವರ ತಂಡ ಭೇಟಿ ನೀಡಿ, ಪಿಪಿಇ ಕಿಟ್, ಮುಖಕ್ಕೆ ಮಾಸ್ಕ್, ಕೈಗೆ ಹ್ಯಾಂಡ್ ಗ್ಲೌಸ್ ಸೇರಿದಂತೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬೀದರ್ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಿಂದ ಶ್ರದ್ಧಾಂಜಲಿ ವಾಹನದ ಮೂಲಕ ಬೀದರ್ ಹೊರವಲಯದ ಸಮುದಾಯ ಶವಾಗಾರದಲ್ಲಿ ಅಂತ್ಯಕ್ರಿಯೆ ಮಾಡ್ತಾರೆ.
ಇನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ವ್ಯವಸ್ಥಾಪಕ ಹುದ್ದೆಯಲ್ಲಿದ್ದ ಮಾಜಿದ್ ಬಿಲಾಲ್ ಅವರು, ಕಳೆದ 10 ವರ್ಷಗಳಲ್ಲಿ ಹತ್ತಾರು ಅನಾಥ ಶವಗಳ ಅಂತ್ಯಕ್ರಿಯೆ ಮಾಡಿದ್ದಾರೆ.