ಬೀದರ್ : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ನಿಮಿತ್ತ ಕರ್ತವ್ಯದ ಮೇಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ದಿಢೀರ್ ನೆಲಕ್ಕೆ ಬಿದ್ದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯಾದಗಿರಿ ಜಿಲ್ಲೆ ಗುರಮಿಟಕಲ್ ಠಾಣೆ ಎಎಸ್ಐ ರಾಜಣ್ಣ ಕುಸಿದು ಬಿದ್ದು ಅಸ್ವಸ್ಥಗೊಂಡರು. ಒಂದು ಕಡೆ ಸಿಎಂ ಅವರ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದ್ದಾಗ ಪೆಂಡಾಲ್ ಹೊರಗೆ ಸಿಬ್ಬಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಂಬುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಇನ್ನು ಸಿಎಂ ಅವರ ಜನತಾ ದರ್ಶನದಲ್ಲಿ ತಾಯಿಯೊಬ್ಬಳು ವಿಕಲಚೇತನ ಮಗುವಿನ ಚಿಕಿತ್ಸೆಗೆ ಸಹಾಯ ಬೇಡಿ ಮಗುವನ್ನು ಹೊತ್ತುಕೊಂಡ ಬಂದಿದ್ದಳು. ಇದನ್ನು ಕಂಡ ಸಿಎಂ ತಕ್ಷಣ ಚಿಕಿತ್ಸೆ ನೀಡುವಂತೆ ಸ್ಥಳದಲ್ಲೇ ಇದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಬ್ಬಾರ ಅವರಿಗೆ ಸೂಚಿಸಿದರು.