ಬೀದರ್: ಏಪ್ರಿಲ್ 1 ರಿಂದ ಮೇ 14 ವರೆಗೆ ಬಸವಕಲ್ಯಾಣ ಉಪಚುನಾವಣೆ ಹಾಗು ಬೀದರ್ ನಗರಸಭೆ ಚುನಾವಣಾ ಕರ್ತವ್ಯ ನಿರ್ವಹಿಸಿದ್ದ 52 ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಚುನಾವಣೆಯ ಕರ್ತವ್ಯಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕಿನ ಒಟ್ಟು 1,434 ಬೋಧಕ ಮತ್ತು ಬೋಧಕೇತರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಚುನಾವಣಾ ಕರ್ತವ್ಯಕ್ಕೂ ಮುನ್ನ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ 67 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇವರನ್ನು ಬಿಟ್ಟು ಉಳಿದವರನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಚುನಾವಣಾ ಕರ್ತವ್ಯ ಮುಗಿಸಿ ಬಂದ ಹಲವರಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ 27 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಪೈಕಿ 16 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬೀದರ್ ನಗರ ಸಭೆಯ ಚುನಾವಣಾ ಕಾರ್ಯನಿರ್ವಹಿಸಿದ್ದ 32 ಶಿಕ್ಷಕರಿಗೆ ಸೋಂಕು ತಗುಲಿದ್ದು, ಈ ಪೈಕಿ 18 ಜನ ಮೃತಪಟ್ಟಿದ್ದಾರೆ. ಹುಮ್ನಾಬಾದ್ನ 4, ಭಾಲ್ಕಿ ಹಾಗು ಔರಾದ್ನಲ್ಲಿ ತಲಾ 7 ಮಂದಿ ಸೇರಿ ಒಟ್ಟು 52 ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ 26 ಸೋಂಕಿತ ಶಿಕ್ಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಕೆಲವರು ಹೋಮ್ ಐಸೋಲೇಷನ್ನಲ್ಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬೀದರ್ ಡಿಡಿಪಿಐ ಟಿ.ಆರ್.ದೊಡ್ಡೆ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸಲಾಗಿತ್ತು. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಸರ್ ಸಿಂಪಡಿಸಿಕೊಂಡು ಮತದಾನ ಮಾಡಿದ್ದಾರೆ. ಆದರೂ ಚುನಾವಣೆ ಕೆಲಸ ಮಾಡುವ ಸಿಬ್ಬಂದಿಗೆ ಕೊರೊನಾ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ 1,091 ಸೋಂಕಿತರು ನಾಪತ್ತೆ: ಕೊರೊನಾ ಅಬ್ಬರ ಇಳಿಮುಖ