ಬಸವಕಲ್ಯಾಣ: ಶರಣರು ರಚಿಸಿದ ವಚನಗಳು ಯಾವುದೇ ವೇದ ಹಾಗೂ ಗ್ರಂಥಗಳಿಗೂ ಕಡಿಮೆ ಇಲ್ಲ. ಎಲ್ಲಾ ಗ್ರಂಥಗಳ ಸಾರ ವಚನ ಸಾಹಿತ್ಯದಲ್ಲಿ ಅಡಗಿದೆ ಎಂದು ಬೆಂಗಳೂರಿನ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ತಾಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದ ಶ್ರೀನಾಗಭೂಷಣ ಶಿವಯೋಗಿಗಳ 50ನೇ ಪುಣ್ಯಸ್ಮರಣೆ ಸುವರ್ಣಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ನೀಡಿದ ಈ ನೆಲ ಅತ್ಯಂತ ಪವಿತ್ರ ಎಂದರು.
ಬಸವಣ್ಣನ ನೇತೃತ್ವದಲ್ಲಿ ಅಂದು ಶರಣರು ರಚಿಸಿದ ವಚನ ಸಾಹಿತ್ಯ ಬೆಳೆಯಬೇಕು. ಶರಣರ ಅನುಭವದಿಂದ ರಚನೆಯಾದ ವಚನಗಳು ಮನಕ್ಕೆ ತಟ್ಟಬೇಕು. ಅವು ಜೀವನದ ಮೇಲೆ ಅಗಾಧ ಪರಿಣಾಮ ಬೀರುತ್ತವೆ ಎಂದರು.
ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿಗೆ ಮಹತ್ವದ ಸ್ಥಾನವಿದೆ. ಸಂಸ್ಕೃತಿ ಎನ್ನುವುದು ಜನಗಳ ಮನದಲ್ಲಿ ಮನೆ ಮಾಡಿದೆ. ನಮ್ಮ ದೇಶದ ಸಂಸ್ಕೃತಿ ಉಳಿಸಿ, ಬೆಳೆಸಿ ಅದನ್ನ ಸಂರಕ್ಷಿಸುವ ಕೆಲಸ ಮಠಗಳು ಮಾಡುತ್ತಿವೆ ಎಂದರು.
ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ಮುಚಳಂಬನ ಪ್ರಣವಾನಂದ ಸ್ವಾಮೀಜಿ, ಶಾಸಕರಾದ ಈಶ್ವರ್ ಖಂಡ್ರೆ, ಬಿ.ನಾರಾಯಣರಾವ್ ಕಾರ್ಯಕ್ರಮದಲ್ಲಿದ್ದರು.