ಬೀದರ್: ಭೀಕರ ಬರದಿಂದ ಬೆಂದು ಹೋದ ಜಿಲ್ಲೆಯ ರೈತರ ಖಾತೆಗಳಿಗೆ ಇನ್ನೊಂದು ವಾರದಲ್ಲಿ ಬರೋಬ್ಬರಿ 40.48 ಕೋಟಿ ರೂಪಾಯಿ ಪರಿಹಾರ ಧನ ಜಮೆ ಆಗಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆದ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಫಸಲ್ ಭಿಮಾ ಯೋಜನೆ ಅಡಿಯಲ್ಲಿ ಈಗಾಗಲೇ ಮುಂಗಾರು ಹಂಗಾಮಿನ ಪರಿಹಾರ ಧನ ಕ್ಲೀಯರ್ ಆಗಿದ್ದು, ಹಿಂಗಾರು ಅನುದಾನ ಇನ್ನೊಂದು ವಾರದಲ್ಲಿ ಜಮೆ ಆಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಯೋಜನೆಗಳು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆ 19 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು ಮುಂದುವರೆಸುವಂತೆ ಸೂಚಿಸಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 100 ಕೋಟಿ ರೂಪಾಯಿ ಕಾಮಗಾರಿಗಳು ಕಳೆದ ಆರು ತಿಂಗಳಲ್ಲಿ ಮುಗಿಸಲಾಗಿದೆ ಎಂದರು.
ಮುದ್ರಾ ಯೋಜನೆ ಅಡಿಯಲ್ಲಿ ನಿರೂದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಆಯುಷ್ಮಾನ್ ಭಾರತ ಯೋಜನೆಯನ್ನು ಪ್ರತಿಯೊಂದು ಗ್ರಾಮಕ್ಕೆ ವಿಸ್ತರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು. ಇನ್ನು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್.ಆರ್. ಮಹದೇವ್, ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ್ ಗಂಗಾವರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.