ಬೀದರ್: ಕಳೆದ ಹಲವು ವರ್ಷಗಳಿಂದ ಬೀದರ್-ಔರಾದ್ ಹೆದ್ದಾರಿ ಕೆಟ್ಟು ಹೋಗಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಈ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಿದ್ದಲ್ಲದೇ ದ್ವಿಪಥ ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 336.64 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ಔರಾದ್ ನಿಂದ ಬೀದರ್ವರೆಗೆ 45 ಕಿಲೋ ಮೀಟರ್ ಉದ್ದದ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಪ್ಪಿಸಲಾಗಿತ್ತು. ಇದಕ್ಕಾಗಿ ಚತುಷ್ಪಥ ರಸ್ತೆಗಾಗಿ ಟೆಂಡರ್ ಕೂಡ ಕರೆಯಲಾಗಿತ್ತು. ಆದ್ರೆ ಸಮರ್ಪಕ ಭೂಸ್ವಾಧೀನ ಪ್ರಕ್ರಿಯೆಯಾಗದ್ದಕ್ಕೆ ತಾಂತ್ರಿಕ ಅಡಚಣೆಯುಂಟಾಗಿ ಟೆಂಡರ್ ಪ್ರಕ್ರಿಯೆ ರದ್ದು ಮಾಡಲಾಗಿತ್ತು. ಇದರಿಂದಾಗಿ ಬೀದರ್- ಔರಾದ್ ಹೆದ್ದಾರಿ ದುರಸ್ಥಿ ಮಾಡಲು ರಾಜ್ಯ ಸರ್ಕಾರಕ್ಕೆ ಆಗದೆ, ಅತ್ತ ಕೇಂದ್ರ ಸರ್ಕಾರದ ಅಧಿನದಲ್ಲಿದ್ದರೂ ಎನೂ ಮಾಡಲಿಕ್ಕಾಗದೆ ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು.
ಇದನ್ನು ಅರಿತ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹಾಗೂ ಸಂಸದ ಭಗವಂತ ಖೂಬಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸತತವಾಗಿ ಸಂಪರ್ಕಿಸಿ ಒತ್ತಡ ಹೇರಿದ್ದರು. ಹೀಗಾಗಿ ಚತುಷ್ಪಥ ರಸ್ತೆಯ ಬದಲಾಗಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಹೆದ್ದಾರಿ ಪ್ರಾಧಿಕಾರ ಭಾರತ ಮಾಲಾ ಯೋಜನೆ ಅಡಿಯಲ್ಲಿ 336.64 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ರಸ್ತೆಯನ್ನು ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸ ಬೇಕು. ಜೊತೆಗೆ ಮುಂದಿನ ಐದು ವರ್ಷಗಳವರೆಗೆ ನಿರ್ವಹಣೆ ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸಿ ಪ್ರಾಧಿಕಾರದ ಡಿಜಿಎಂ ಆಶಿಸ್ ಕುಮಾರ್ ಆದೇಶ ಹೊರಡಿಸಿದ್ದಾರೆ.