ಬೀದರ್: ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವನೆ ಮಾಡಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆನೋವೂ ವಾಂತಿಭೇದಿ ಕಾಣಿಸಿಕೊಂಡಿರುವ ಹಿನ್ನೆಲೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ಶುಕ್ರವಾರ ರಾತ್ರಿ ಜರುಗಿದೆ. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ನಿಂಬೂರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಮಧ್ಯಾಹ್ನ ಬಿಸಿಯೂಟದ ಅನ್ನ ಸಾಂಬಾರ್ ಸೇವನೆ ಮಾಡಿದ್ದರಿಂದ ಹೊಟ್ಟೆ ನೋವು ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದರು.
ಶಾಲೆಯ ಕೆಲವೇ ವಿದ್ಯಾರ್ಥಿಗಳಲ್ಲಿ ಮೊದಲು ಹೊಟ್ಟೆ ನೋವು ವಾಂತಿ ಭೇದಿ ಶುರುವಾಗಿರುವುದು ಕಂಡು ಬಂದಿತು. ನಂತರ ಮನೆಗೆ ತೆರಳಿದ ಇನ್ನುಳಿದ ವಿದ್ಯಾರ್ಥಿಗಳಲ್ಲಿಯು ವಾಂತಿ ಭೇದಿ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದು, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಊಟದ ವ್ಯತ್ಯಾಸದಲ್ಲಿ ಏರುಪೇರು ಆಗಿದ್ದರಿಂದ ಈ ಸಮಸ್ಯೆ ಆಗಿದೆ. ಭಯಪಡುವ ಯಾವುದೇ ಸಮಸ್ಯೆ ಇಲ್ಲ. ಎಲ್ಲ ವಿದ್ಯಾರ್ಥಿಗಳು ಬೇಗ ಗುಣಮುಖರಾಗಲಿದ್ದಾರೆ ಎಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ತಿಳಿಸಿದ್ದಾರೆ.
ನಾನೂ ಈಗಾಗಲೇ ವೈದ್ಯರೊಂದಿಗೆ ಚರ್ಚಿಸಿರುವೆ. ವೈದ್ಯರು ಭಯಪಡುವಂತಹದ್ದೇನು ಇಲ್ಲವೆಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಬೇಗ ಗುಣಮುಖರಾಗಿ, ಮೊದಲಿನಂತೆ ಶಾಲೆಗೆ ಬರಲಿದ್ದಾರೆ. ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಹೆದರ ಬೇಕಾಗಿಲ್ಲ. ವ್ಯದ್ಯರು ಕಾಳಜಿ ವಹಿಸಿ ವೈದ್ಯೋಪಚಾರ ಮಾಡಿದ್ದಾರೆ ಎಂದು ಪೋಷಕರಿಗೆ ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ಹೇಳಿದರು.
ಹಲ್ಲಿ ಬಿದ್ದ ಸಾರು ಸೇವಿಸಿದ್ದ 23 ವಿದ್ಯಾರ್ಥಿಗಳು ಅಸ್ವಸ್ಥ.. ಶಾಲೆ ಆರಂಭವಾಗಿ ಜೂನ್ ತಿಂಗಳಲ್ಲಿ ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿರುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬಂದಿವೆ. ಇಂಥ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹಾರೂಗೊಪ್ಪ ಗ್ರಾಮದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ 23 ಮಕ್ಕಳು ಅನ್ನ ಸಾರು ಸೇವಿಸಿ ಅಸ್ವಸ್ಥಗೊಂಡಿದ್ದರು.
ಜೂನ್ 19ರಂದು ಬೆಳಗ್ಗೆ ವಿದ್ಯಾರ್ಥಿಗಳು ಉಪಹಾರ ಸೇವಿಸಿದ್ದರು. ಚಪಾತಿ, ಅನ್ನ ಸಾರು ನೀಡಲಾಗಿತ್ತು. ಸಾರಿಗೆ ಹಲ್ಲಿ ಬಿದ್ದಿದೆ. ಅದೇ ಸಾರನ್ನು ವಿದ್ಯಾರ್ಥಿಗಳು ಸೇವಿಸಿದ್ದು ಕೆಲ ಸಮಯದ ನಂತರ ಹೊಟ್ಟೆ ನೋವು, ವಾಂತಿಭೇದಿ ಕಾಣಿಸಿಕೊಂಡಿತ್ತು. ತಕ್ಷಣವೇ ಆ ವಿದ್ಯಾರ್ಥಿಗಳನ್ನು ವಸತಿ ನಿಲಯದ ಸಿಬ್ಬಂದಿ ಸಮೀಪದ ಇಂಚಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೆಲವು ಮಕ್ಕಳು ಚೇತರಿಸಿಕೊಂಡಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿದ್ದಾರೆ.
ಸವದತ್ತಿ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.