ಬಸವಕಲ್ಯಾಣ(ಬೀದರ್): ತಾಲೂಕಿನಲ್ಲಿ ಮಾರಕ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ 10 ಜನರಲ್ಲಿ ವೈರಸ್ ಪತ್ತೆಯಾಗುವ ಮೂಲಕ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
ತಾಲೂಕಿನ ಹೋಬಳಿ ಕೇಂದ್ರವಾಗಿರುವ ಕೋಹಿನೂರ ಗ್ರಾಮದಲ್ಲಿ ಮೂವರು ಮಹಿಳೆಯರು ಸೇರಿ ಒಟ್ಟು 10 ಜನರಲ್ಲಿ ಸೋಂಕು ದೃಢಪಟ್ಟಿದ್ದು, ತಾಲೂಕಿನಲ್ಲಿ ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 16ಕ್ಕೆ ಏರಿದೆ.
ಕೋಹಿನೂರಿನಲ್ಲಿ ಸೋಂಕು ದೃಢಪಟ್ಟವರ ಪೈಕಿ ಓರ್ವ ಮಹಾರಾಷ್ಟ್ರದ ರತ್ನಗಿರಿಯಿಂದ ಬಂದವರಾಗಿದ್ದರೆ, ಉಳಿದ 9 ಜನ ಮುಂಬೈನಿಂದ ಆಗಮಿಸಿದವರಾಗಿದ್ದಾರೆ. ಇವರೆಲ್ಲರನ್ನು ಬೀದರ್ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರದಿಂದ ಆಗಮಿಸಿದ ಒಟ್ಟು 10 ಜನರಿಗೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ 70 ಜನರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಉಳಿದ 40 ಜನರ ಗಂಟಲು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸುವ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯುತ್ತಿದೆ.
ತಾಲೂಕಿನ ಕೋಹಿನೂರ 10, ಧನ್ನೂರ(ಕೆ)ವಾಡಿ 3, ಉಜಳಂಬ 1, ನಾರಾಯಣಪೂರ 1 ಹಾಗೂ ಬಸವಕಲ್ಯಾಣ ನಗರದಲ್ಲಿ ಓರ್ವನಿಗೆ ಸೇರಿ ಇದುವರೆಗೆ ಒಟ್ಟು 16 ಜನರು ಸೋಂಕಿಗೆ ಒಳಗಾಗಿದ್ದಾರೆ.