ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲೂ ಭಾನುವಾರ ಜನತಾ ಕರ್ಫ್ಯೂ ವಾತಾವರಣವಿದ್ದು, ಈ ನಡುವೆ ವಿವಿಧ ನಿಲ್ದಾಣಗಳಲ್ಲಿ ವಾಹನ ಸೌಲಭ್ಯಗಳಿಲ್ಲದೆ ಪರದಾಡಿದ ಬಡಜನರು ಹಾಗೂ ಇತರ ಸಾರ್ವಜನಿಕರಿಗೆ ಆರು ಜನ ಯುವಕರು ಉಚಿತವಾಗಿ ಆಹಾರ ಪೂರೈಸಿದ್ದಾರೆ.
ಜನತಾ ಕರ್ಫ್ಯೂ ಇದ್ದ ಕಾರಣ ನಗರದ ರಾಯಲ್, ಮೋತಿ, ರೈಲ್ವೆ ನಿಲ್ದಾಣಗಳಲ್ಲಿ ಊರಿಗೆ ಹೋಗಲು ವಾಹನಗಳಿಲ್ಲದೆ ನಿಲ್ದಾಣದಲ್ಲಿ ಹೊಟ್ಟೆ ಹಸಿವಿನಿಂದ ಹಲವು ಪ್ರಯಾಣಿಕರು ಕಾಲ ಕಳೆಯುತ್ತಿದ್ದರು. ಇದರ ನಡುವೆ ಇಂದು ಬೆಳಗ್ಗೆ ಮಹಮ್ಮದ್ ಯೂಸೂಫ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ನಗರದಲ್ಲಿ ಟಿಫನ್ ಮಾಡಲು ಎಲ್ಲಾ ಕಡೆ ಸುತ್ತಾಡಿದ್ದಾರೆ. ಆದರೆ ಇವರಿಗೆ ಒಂದು ಟಿಫನ್ ಸೆಂಟರ್ ಕೂಡಾ ಸಿಕ್ಕಿಲ್ಲ. ಜನತಾ ಕರ್ಫ್ಯೂ ನಿಮಿತ್ತ ಎಲ್ಲಾ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಹೀಗಾಗಿ ಬೇರೆ ಬೇರೆ ಊರುಗಳಿಗೆ ಹೋಗಲು ವಿವಿಧ ನಿಲ್ದಾಣಗಳಲ್ಲಿ ಕಾಲಕಳೆಯುವ ಸಾರ್ವಜನಿಕರಿಗೆ ಯಾವುದೇ ಹೋಟೆಲ್ ಇಲ್ಲ, ಟಿಫನ್ ಸೆಂಟರ್ ಇಲ್ಲ. ಅವರ ಹೊಟ್ಟೆ ಪಾಡೇನು ಎಂದು ಮಹಮ್ಮದ್ ಯೂಸೂಫ್ ಆಲೋಚನೆ ಮಾಡಿದ್ದಾರೆ.
ಬಳಿಕ ಯೂಸೂಫ್ ಹಾಗೂ ಆತನ ಐದು ಜನ ಸ್ನೇಹಿತರು ತಮ್ಮ ಮನೆಯಲ್ಲಿಯೇ 150 ಪ್ಯಾಕೇಟ್ ಪಲಾವ್ ಹಾಗೂ ದಾಲ್ಚ ಮಾಡಿಸಿಕೊಂಡು ಮೂರು ಬೈಕ್ಗಳಲ್ಲಿ ನಗರದ ವಿವಿಧ ಪ್ರದೇಶಗಳನ್ನು ಸುತ್ತಾಡಿದ್ದಾರೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಬೆಂಗಳೂರು ರಸ್ತೆ, ರಾಯಲ್ ವೃತ್ತದಲ್ಲಿನ ಬಡ ಮತ್ತು ಸಾರ್ವಜನಿಕರ ಹತ್ತಿರ ಹೋಗಿ ಉಚಿತವಾಗಿ ಖುಷ್ಕಾ ಹಾಗೂ ದಾಲ್ಚ ನೀಡಿ ಅವರ ಹಸಿವು ನೀಗಿಸಿದ್ದಾರೆ.