ಬಳ್ಳಾರಿ : ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸಣ್ಣ - ಪುಟ್ಟ ವಿಷಯಗಳಿಗೆ ಕಿವಿಕೊಟ್ಟು ಆತ್ಮಹತ್ಯೆ ದಾರಿಗೆ ಸಾಗದೇ ತಮ್ಮ ಭವಿಷ್ಯದ ಗುರಿಯ ಕಡೆಗೆ ಗಮನಹರಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರ್ಜುನ್ ಎಸ್.ಮಲ್ಲೂರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಆಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ, ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲ್ಲೂರ್ ಆತ್ಮಹತ್ಯೆಗೆ ಪೂರ್ಣ ವಿರಾಮ ನೀಡಬೇಕೆಂದು ತಿಳಿಸಿದರು.
ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಟಿ.ರಾಜಶೇಖರ ರೆಡ್ಡಿ ಮಾತನಾಡಿ, ತೀವ್ರ ಸ್ವರೂಪದ ಮಾನಸಿಕ ಕಾಯಿಲೆಗಳಾದ ಸ್ಕಿಜೋಪ್ರಿನಿಯಾ, ಮೇನಿಯಾ ಕಾಯಿಲೆ ಹೀಗೆ ಇನ್ನೂ ಹಲವು ಕಾಯಿಲೆಗಳಿಂದ ಪ್ರತೀ ವರ್ಷದಲ್ಲಿ 5 ರಿಂದ 6 ಜನರು ಹಾಗೂ ಅಲ್ಪ ಪ್ರಮಾಣದ ಮಾನಸಿಕ ರೋಗಗಳಾದ ಆತಂಕದ ಖಾಯಿಲೆ, ಖಿನ್ನತೆ, ಗೀಳುರೋಗ, ಹಿಸ್ಟಿರೀಯಾ ಕಾಯಿಲೆ ಮತ್ತು ಇತರ ಕಾಯಿಲೆಯಿಂದ ಬಳಲುವ 10 ರಿಂದ 12ರಷ್ಟು ಜನರಿದ್ದಾರೆ. 2014ರ ಜನಗಣತಿ ಪ್ರಕಾರ ದೇಶದಲ್ಲಿ 1.32 ಲಕ್ಷ ಜನ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆಂದು ಅವರು ಮಾಹಿತಿ ನೀಡಿದರು.
ಚಿಕಿತ್ಸೆ ಹಾಗೂ ಸಹಾಯವಾಣಿಯ ಲಭ್ಯತೆ : ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸಾಮಾನ್ಯ ವೈದ್ಯಾಧಿಕಾರಿಗಳು ತರಬೇತಿ ಪಡೆದು ಈ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಕೌಶಲ್ಯ ಹೊಂದುತ್ತಾರೆ. ನಂತರ ರೋಗಿಗಳಿಗೆ ಹತ್ತಿರವೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು, ಜಿಲ್ಲಾ ಅಥವಾ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗಳಲ್ಲಿ ಸರಿಯಾದ ಔಷಧಗಳ ವ್ಯವಸ್ಥೆಯು ಲಭ್ಯವಿದೆ ಎಂದರು.