ಬಳ್ಳಾರಿ: ಜಿಲ್ಲೆಯ ಸಂಡೂರು ಪಟ್ಟಣದಲ್ಲಿರುವ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಮಹಿಳೆಯೋರ್ವಳು ನಿಗೂಢವಾಗಿ ಸಾವನ್ನಪ್ಪಿದ್ದು, ಮೀನುಗಾರಿಕೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ.
ಸಂಡೂರು ಪಟ್ಟಣದ ಮೀನುಗಾರಿಕೆ ಇಲಾಖೆಯಲ್ಲಿ ಕ್ಷೇತ್ರ ಪಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೆಹಮತ್ ಬೀ (32) ಮೃತ ಮಹಿಳೆ. ಈಕೆಯ ಮೃತದೇಹದೊಂದಿಗೆ ಮೈಸೂರು ಜಿಲ್ಲೆಯ ಹುಣಸೂರು ಮೂಲದ ಕುಮಾರ ಎಂಬಾತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಸಂಡೂರಿನ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದ ಕುಮಾರ, ರೆಹಮತ್ ಬೀ ಎಂಬಾಕೆಗೆ ಚಾಕುವಿನಿಂದ ತಿವಿದು ಅಮಾನುಷವಾಗಿ ಕೊಲೆಗೈದು ನಂತರ ಆತನು ನೇಣಿಗೆ ಶರಣಾಗಿದ್ದಾನೆ ಎಂದು ಮಹಿಳೆಯ ಸಂಬಂಧಿಕರು ದೂರು ದಾಖಲಿಸಿದ್ದಾರೆ.
ನೇಣುಬಿಗಿದುಕೊಂಡು ಸಾವನ್ನಪ್ಪಿದ ಕುಮಾರನ ಬೈಕ್ ಮತ್ತು ಮೊಬೈಲ್ ಪೋನ್ ಪೊಲೀಸರಿಗೆ ಲಭ್ಯವಾಗಿದ್ದು, ಈ ಮೂಲಕ ಕುಮಾರ್ ನೇಣಿಗೆ ಶರಣಾಗಿದ್ದರ ಕುರಿತು ಹಾಗೂ ರೆಹಮತ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.