ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ (ವಿಮ್ಸ್) ವೈದ್ಯರು-ಸಿಬ್ಬಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮೃತದೇಹ ಸಾಗಿಸಲು ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ತನಿಖೆಗೆ ಮುಂದಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು, ಬಳ್ಳಾರಿಯ ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ನೇತೃತ್ವದ ತಂಡವನ್ನ ರಚನೆ ಮಾಡಿದ್ದಾರೆ. ಈಗಾಗಲೇ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಬಂಧಿಕರ ಬಳಿ ಎಷ್ಟು ಪ್ರಮಾಣದ ಹಣ ಸುಲಿಗೆ ಮಾಡಿದ್ದಾರೆ ಎಂದು ತನಿಖೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.
ಜಿಲ್ಲೆಯ ಕೊಟ್ಟೂರು ಪಟ್ಟಣಕ್ಕೆ ವ್ಯಕ್ತಿಯ ಮೃತದೇಹವನ್ನ ಸಾಗಿಸಲು ಅಂದಾಜು 30 ಸಾವಿರ ರೂ. ಡಿಮ್ಯಾಂಡ್ ಮಾಡಲಾಗಿತ್ತು. ಪರಸ್ಪರ ಮಾತುಕತೆಯ ಮೂಲಕ 15 ಸಾವಿರ ರೂ.ಗೆ ವ್ಯಾಪಾರ ಕುದಿರಿಸಿದ್ದರೆನ್ನಲಾದ ವಿಮ್ಸ್ ನ ವೈದ್ಯರು- ಸಿಬ್ಬಂದಿ ಖಾಸಗಿ ಆ್ಯಂಬುಲೆನ್ಸ್ ವಾಹನದಲ್ಲಿಯೇ ಕಳಿಸಲಾಗಿತ್ತು. ಸರ್ಕಾರಿ ಆ್ಯಂಬ್ಯುಲೆನ್ಸ್ ಲಭ್ಯವಿರಲಿಲ್ಲ ಎಂಬೆಲ್ಲಾ ಮಾಹಿತಿಯನ್ನ ಎಸಿ ರಮೇಶ ಕೋನರೆಡ್ಡಿ ಅವರು ಸಂಗ್ರಹಿಸುತ್ತಿದ್ದಾರೆ.
'ಮೃತದೇಹ ಸಾಗಿಸಲು ವ್ಯಾಪಾರಕ್ಕಿಳಿದ ವಿಮ್ಸ್ ವೈದ್ಯರು: ಉದ್ಯಮಿ ಟಪಾಲ್ ಗಣೇಶ ಆರೋಪ' ಶೀರ್ಷಿಕೆಯಡಿ ಈಟಿವಿ ಭಾರತ ವರದಿ ಮಾಡಲಾಗಿತ್ತು.
ನಿನ್ನೆಯಿಂದಲೇ ಈ ಕುರಿತು ತನಿಖೆಯನ್ನ ಆರಂಭಿಸಲಾಗಿದೆ. ಈ ಸಂಬಂಧ ಗಣಿ ಉದ್ಯಮಿ ಟಪಾಲ್ ಗಣೇಶ ಅವರನ್ನೂ ಕೂಡ ಎಸಿ ರಮೇಶ ಕೋನರೆಡ್ಡಿ ಸಂಪರ್ಕಿಸಿದ್ದಾರೆ. ಘಟನೆಯ ವಿವರದ ಕುರಿತು ಮಾಹಿತಿ ಪಡೆದಿದ್ದು, ವಿಮ್ಸ್ ಆಸ್ಪತ್ರೆಯ ಶವಾಗಾರದ ವೈದ್ಯ ಸಿಬ್ಬಂದಿಯನ್ನ ಮತ್ತಷ್ಟು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ. ಮೃತದೇಹ ಸಾಗಿಸಲು ವ್ಯಾಪಾರಕ್ಕಿಳಿಯುವ ವಿಮ್ಸ್ ನ ವೈದ್ಯರು, ಸಿಬ್ಬಂದಿ ಮೇಲೆ ತನಿಖೆ ನಡೆದು, ಯಾವ ರೀತಿಯ ಕ್ರಮ ಆಗುತ್ತೆ ಎಂಬುದನ್ನ ಕಾದುನೋಡಬೇಕಿದೆ.