ವಿಜಯನಗರ : ಹುಬ್ಬಳ್ಳಿಯಲ್ಲಿ ಗಲಾಟೆ ನಡೆದಿರೋದು ದುರಾದೃಷ್ಟಕರ. ಸಣ್ಣ ವಿಚಾರಗಳಿಗೂ ಯಾಕೆ ಕೆರಳ್ತಾರೆ ಎನ್ನುವುದು ಗೊತ್ತಾಗ್ತಿಲ್ಲ. ಸೆಕ್ಯೂಲರ್ಗಳು ಯಾಕೆ ಈಗ ಮಾತನಾಡುತ್ತಿಲ್ಲ? ನಮ್ಮ ಚಾರಿತ್ರಿಕ ದೇವಸ್ಥಾನಗಳನ್ನೇ ನಾಶ ಮಾಡಿದ ಮೇಲೂ ಕೂಡ ನಾವು ಶಾಂತಿ, ಸೌಹಾರ್ದತೆ, ವಿಶ್ವಾಸದಿಂದ ಇದ್ದೇವೆ. ಒಂದು ಸ್ಟೇಟಸ್ ಹಾಕಿದ್ದಕ್ಕೆ ಕಾನೂನು ಯಾಕೆ ಕೈಗೆತ್ತಿಕೊಳ್ಳಬೇಕು. ಈ ನೆಲದ ಕಾನೂನಿಗೆ ಬೆಲೆನೇ ಇಲ್ವಾ, ಸಣ್ಣ ಸಣ್ಣ ಘಟನೆಗಳನ್ನಿಟ್ಟುಕೊಂಡು, ಗಲಾಟೆ ಮಾಡೋಕೆ ಕಾಯ್ತಾ ಇರ್ತಾರಾ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ ರವಿ, ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದ್ರು. 150ಕ್ಕೂ ಹೆಚ್ಚು ವಾಹನಗಳನ್ನು ಸುಟ್ರು, ಅಂಗಡಿ, ಮಳಿಗೆ ಸುಟ್ರು. ಆವಾಗಲೂ ಒಂದು ಸಣ್ಣ ಸ್ಟೇಟಸ್ ಕಾರಣ ಆಗಿತ್ತು. ಅವರ ಮಾನಸಿಕತೆ ಯಾವ ರೀತಿ ಇತ್ತು. ಇದು ಈ ನೆಲದ ಕಾನೂನಿಗೆ ಬೆಲೆ ಕೊಡುವ ಮಾನಸಿಕತೆನಾ? ಎಂದು ಪ್ರಶ್ನಿಸಿದರು.
ನಾನು ಈ ಮಾತು ಹೇಳಿದರೆ ನನ್ನನ್ನೂ ಕಮ್ಯೂನಲ್ ಅಂತಾ ಚಿತ್ರಿಸುತ್ತಾರೆ. ಸ್ಟೇಟಸ್ ಹಾಕಿದವನು ಯಾರೇ ಇರಲಿ, ಹಿಂದೂ, ಮುಸ್ಲಿಂ ಆಗಿರಲಿ, ಗಲಭೆಗೆ ಪ್ರಚೋದಿಸಲು ಹಾಕಿರಬಹುದು. ಅದಕ್ಕಾಗಿ ಹೀಗೆ ಮಾಡೋದಾ? ಪೊಲೀಸ್ ಠಾಣೆಗೆ ದೂರು ಕೊಡಿ, ಕಾನೂನು ಕ್ರಮಕ್ಕೆ ಆಗ್ರಹಿಸಿ, ಕಾನೂನು ಕೈಗೆತ್ತಿಕೊಳ್ಳಿ ಅಂದವರು ಯಾರು ಎಂದರು.
ಅವರು ಮಾತ್ರ ಉಪ್ಪು ಹುಳಿ ಖಾರ ತಿನ್ನುವವರಾ, ಉಳಿದವರು ಯಾರು ತಿನ್ನೋದಿಲ್ವಾ? ಅವರಿಗೆ ಮಾತ್ರ ರೋಷವಿರೋದು, ನಮಿಗ್ಯಾರಿಗೂ ರೋಷವಿಲ್ಲ. ಕಾರ್ಟೂನಿಸ್ಟ್ ಎಂ.ಎಫ್.ಹುಸೇನ್ ಇದ್ನಲ್ಲಾ, ನಮ್ಮ ಆರಾಧ್ಯ ದೈವ ಸರಸ್ವತಿಯನ್ನು ನಗ್ನವಾಗಿ ಚಿತ್ರಿಸಿದ್ದ. ಹಾಗಿದ್ರೆ ನಾವು ಅವರನ್ನೆಲ್ಲ ಜೀವಂತವಾಗಿ ಸುಟ್ಟು ಬಿಡಬೇಕಿತ್ತಾ? ಇನ್ನೊಬ್ಬ ಜೈಲಲ್ಲಿದ್ದಾನೆ. ದೇವಾನು ದೇವತೆಗಳನ್ನ ಹಾಸ್ಯ ಮಾಡುತ್ತಾನೆ. ಆಂಧ್ರಪ್ರದೇಶದಲ್ಲಿ ಮೂರ್ತಿಗಳನ್ನು ಭಗ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಹಾಗಾದರೆ ನಾವು ಯಾವ ರೀತಿ ಪ್ರತಿಕಿಯಿಸಬೇಕು ಎಂದರು.
ಇವೆಲ್ಲದ್ದಕ್ಕೆ ಈ ರೀತಿ ಗಲಾಟೆ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಈ ಪ್ರತಿಯೊಂದಕ್ಕೂ ಗಲಾಟೆ ಮಾಡುವ ಮಾನಸಿಕತೆಯಿಂದ ನಾವು ಹೊರಬರಬೇಕು. ಈ ನೆಲದ ಕಾನೂನು, ಸಂವಿಧಾನದ ಬಗ್ಗೆ ಮಾತನಾಡುವ ಸೆಕ್ಯೂಲರ್ಗಳು ಏನು ಮಾಡ್ತಾ ಇದ್ದಾರೆ? ಯಾಕೆ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ? ಶಾಂತಿ ಕಾಪಾಡಬೇಕು ಅಷ್ಟೇ.. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಿ.ಟಿ. ರವಿ ಒತ್ತಾಯಿಸಿದರು.
ಇದನ್ನೂ ಓದಿ: ಆಕ್ಷೇಪಾರ್ಹ ಪೋಸ್ಟ್ನಿಂದ ಹುಬ್ಬಳ್ಳಿ ಪ್ರಕ್ಷುಬ್ಧ.. ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ, ವಾಹನಗಳು ಜಖಂ