ಬಳ್ಳಾರಿ: ಕಾಂಗ್ರೆಸ್ ಮಾಜಿ ಶಾಸಕ ಅನಿಲ್ ಲಾಡ್ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅನಿಲ್ ಲಾಡ್ ಪ್ರಭಾವಿ ನಾಯಕರಾಗಿದ್ದು, ಜಿಲ್ಲೆಯಲ್ಲಿ ಅವರ ಸಮುದಾಯ ನೆಲೆಸಿದೆ. ಹೀಗಾಗಿ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಿಎಸ್ವೈ ಜೊತೆ ಚರ್ಚಿಸುವೆ. ಶೀಘ್ರವೇ ಅವರನ್ನ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ಮಾಡ್ತೇನೆ. ಅನಿಲ್ ಲಾಡ್, ಈ ಭಾಗದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ಅವರು ಪಕ್ಷಕ್ಕೆ ಬರೋದರಿಂದ ಉಪಚುನಾವಣೆಯಲ್ಲಿ ಸಹಾಯ ಆಗಬಹುದು. ಯಾವ ಸಮಯದಲ್ಲಿ ಸೇರಿಸಿಕೊಳ್ಳಬೇಕೆಂಬುದು ಚರ್ಚೆ ಮಾಡುತ್ತೇವೆ. ಚುನಾವಣೆ ಇರೋದರಿಂದ ನಮ್ಮ ನಾಯಕರೆಲ್ಲರೂ ಬ್ಯುಸಿಯಾಗಿದ್ದಾರೆ.
ಇನ್ನು, ಲಾಡ್ ಅವರು, ಮೂಲ ಬಿಜೆಪಿಯವರೇ. ಮೊದಲು ಬಿಜೆಪಿಯಿಂದಲೇ ಶಾಸಕರಾಗಿದ್ದರು. ಅವರು ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ನನ್ನ ಬಳಿ ಬಂದು ಮಾತನಾಡಿ ಹೋಗಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಿರವಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ನೀಡಬೇಕು. ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಇದಕ್ಕಾಗಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಲಾಗಿದೆ. ಎರಡು ತಿಂಗಳ ಕಾಲಮಿತಿ ನಿಗದಿ ಮಾಡಲಾಗಿದೆ. ಈ ಹಿಂದೆ ವಾಲ್ಮೀಕಿ ಜಯಂತಿಯನ್ನೂ ಸಿಎಂ ಯಡಿಯೂರಪ್ಪ ಅವರೇ ಜಾರಿ ಮಾಡಿದ್ದು, ಇದೀಗ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿಯನ್ನೂ ಅವರೇ ಜಾರಿಗೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.