ಹೊಸಪೇಟೆ : ತುಂಗಭದ್ರಾ ಜಲಾಶಯದಿಂದ 40 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು, ಹಂಪಿಯಲ್ಲಿನ ನದಿ ಪಾತ್ರದ ಸ್ಮಾರಕಗಳು ಮುಳುಗಡೆ ಹಂತಕ್ಕೆ ತಲುಪಿವೆ.
ಹಂಪಿ ಸ್ನಾನಘಟ್ಟಕ್ಕೆ ನದಿ ನೀರು ನುಗ್ಗಿದ್ದು, ಈ ಸ್ಥಳಗಳಲ್ಲಿ ಸ್ನಾನ ಮಾಡಬಾರದೆಂದು ಭಕ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ಮಾಧಿ ಮಂಟಪಗಳು ಕಾಲು ಭಾಗ ನೀರಿನಿಂದ ಮುಳಗಡೆಯಾಗಿದ್ದವು. ಇನ್ನು ಚಕ್ರತೀರ್ಥ ಕೋದಂಡರಾಮ ಹಾಗೂ ಯಂತ್ರೋದ್ಧಾರಕ ದೇವಸ್ಥಾನಕ್ಕೆ ಹೋಗುವ ಒನಕೆ ಕಿಂಡಿಯ ಸಮೀಪ ನೀರು ಬಂದಿದೆ.
ನದಿ ಮಧ್ಯದಲ್ಲಿರುವ ಪುರಂದರ ಮಂಟಪ ಸಂಪೂರ್ಣ ಮುಳುಗಡೆ ಹಂತಕ್ಕೆ ತಲುಪಿದೆ. ಹಂಪಿ ಹಾಗೂ ವಿರುಪಾಪುರ ಗಡ್ಡೆಗೆ ಸಂಪರ್ಕ ಕಲ್ಪಿಸುವ ಬೋಟ್ ಸಂಚಾರ ಸ್ಥಗಿತವಾಗಿತ್ತು. ಈ ವರ್ಷದಲ್ಲಿ ಮೂರ್ನಾಲ್ಕು ಬಾರಿ ಪ್ರವಾಹ ಬಂದಿದ್ದು, ಬೋಟ್ ಸಂಚಾರಕ್ಕೆ ಅಡ್ಡಿಯುಂಟಾಗಿದೆ.