ಬಳ್ಳಾರಿ: ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದರು ಎಂಬ ಕಾರಣಕ್ಕೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳನ್ನು ಹೊರಹಾಕಿರುವ ಘಟನೆ ಬಳ್ಳಾರಿಯಿಂದ ವರದಿಯಾಗಿದೆ. ನಗರದ ಕೌಲ್‌ಬಜಾರ್ ಪ್ರದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಊಟದ ವಿರುದ್ಧ ಪ್ರತಿಭಟಿಸಿದ 25 ವಿದ್ಯಾರ್ಥಿಗಳನ್ನು ಗುರುವಾರ ಹಾಸ್ಟೆಲ್‌ನಿಂದ ಹೊರ ಹಾಕಲಾಗಿದೆ.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಬುಧವಾರ ರಾತ್ರಿ ಕೋಳಿ ಸಾರು ನೀಡಲಾಗಿತ್ತು. ಈ ಸಾರು ಕಳಪೆಯಾಗಿದ್ದನ್ನು ಕೆಲವು ವಿದ್ಯಾರ್ಥಿಗಳು ಪ್ರಶ್ನಿಸಿದ್ದರು. ಆನಂತರ ವಿದ್ಯಾರ್ಥಿಗಳು ಸಾರಿನ ಬಕೆಟ್ ಸಮೇತ ಜಿಲ್ಲಾಧಿಕಾರಿ ಬಳಿ ತಮ್ಮ ಅಳಲನ್ನು ತೋಡಿಕೊಳ್ಳಲು ಅವರ ಮನೆಗೆ ಹೋಗಿದ್ದಾರೆ. ಹಾಸ್ಟೆಲ್‌ನಲ್ಲಿ ಕಳಪೆ ಊಟ ಕೊಡುತ್ತಿರುವುದು ಇದೇ ಮೊದಲಲ್ಲ. ಹಿಂದೆ ಅನೇಕ ಸಲ ದೂರು ಕೊಡಲಾಗಿದೆ. ಆದರೆ, ಯಾರೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಹಾಸ್ಟೆಲ್ ವಾರ್ಡನ್ ಕೊಟ್ಟ ಸ್ಪಷ್ಟನೆ ಏನು?: ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ಹಾಸ್ಟೆಲ್ ವಾರ್ಡನ್ ಶಿವಪ್ಪ ಅವರು, ’’ಮೆನು ಚಾರ್ಟ್ ಪ್ರಕಾರ ಪ್ರತಿ ಬುಧವಾರ ಚಿಕನ್ ಇರುತ್ತದೆ. ಹಾಗೆ ನಿನ್ನೆ ಚಿಕನ್ ಮಾಡಲಾಗಿತ್ತು. ಹಾಸ್ಟೆಲ್ನಲ್ಲಿರುವ ಕೆಲವು ವಿದ್ಯಾರ್ಥಿಗಳು ಚಿಕನ್ ಸಾರು ಚೆನ್ನಾಗಿಲ್ಲ ನೀವು ಊಟ ಮಾಡಿ ನೋಡಿ ಎಂದಿದ್ದಾರೆ. ಅವರ ಎದುರೇ ಊಟ ಮಾಡಿ, ಸಾರು ಚೆನ್ನಾಗಿದೆ ಎಂದು ಹೇಳಿದೆ. ಅದನ್ನು ಒಪ್ಪದ ವಿದ್ಯಾರ್ಥಿಗಳು ತಾಲೂಕು ಅಧಿಕಾರಿಯನ್ನು ಕರೆಸಬೇಕು ಎಂದು ಪಟ್ಟು ಹಿಡಿದರು. ಅವರೂ ಬಂದು ಊಟ ಮಾಡಿದ್ದಾರೆ, ಊಟ ಮಾಡಿ ಸ್ವಲ್ಪ ಮಸಾಲೆ ಜಾಸ್ತಿಯಾಗಿದೆ. ಅಡುಗೆಯವರಿಗೆ ಮುಂದಿನ ಬಾರಿಯಿಂದ ಮಸಾಲೆ ಸರಿಯಾಗಿ ಹಾಕುವಂತೆ ಹೇಳುತ್ತೇನೆ. ನೀವು ಊಟ ಮಾಡಿ ನಿಮ್ಮ ಕೊಠಡಿಗಳಿಗೆ ಹೋಗಿ ಎಂದು ಹೇಳಿದ್ದಾರೆ‘‘ ಎಂದರು.
ಆದರೆ, ವಿದ್ಯಾರ್ಥಿಗಳು ಅವರ ಮಾತು ಕೇಳದೆ ನಮಗೆ ಸುಳ್ಳು ಭರವಸೆ ಬೇಡ, ನಮಗೆ ನ್ಯಾಯ ಬೇಕು ಎಂದು ಎರಡು ಬಕೆಟ್ಗಳಲ್ಲಿ ಚಿಕನ್ ಸಾರು ಹಾಕಿಕೊಂಡು ಡಿಸಿ ಮನೆ ಹತ್ರ ಹೋಗಿದ್ದಾರೆ. ಕೌಲ್ ಬಜಾರ್ ಸ್ಟೇಷನ್ ಹತ್ತಿರ ಪೊಲೀಸರು ಕೂಡ ಗುಂಪಾಗಿ ಬರುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು, ಈ ಹೊತ್ತಲ್ಲಿ ಯಾವ ಅಧಿಕಾರಿಗಳು ಸಿಗೋದಿಲ್ಲ. ನಾಳೆ ನಿಮ್ಮ ಬಳಿ ಅಧಿಕಾರಿಗಳನ್ನು ಕಳುಹಿಸುತ್ತೇವೆ. ನಿಮ್ಮ ಹಾಸ್ಟೆಲ್ಗೆ ಹೋಗಿ ಎಂದಿದ್ದಾರೆ.
ವಿದ್ಯಾರ್ಥಿಗಳು ಅವರ ಮಾತನ್ನೂ ಕೇಳದೆ, ಅಲ್ಲಿಂದ ನೇರವಾಗಿ ಡಿಸಿ ಮನೆ ಬಳಿ ಹೋಗಿದ್ದಾರೆ. ಅಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇಲಾಖೆಯವರು ನಾವು ಸೇರಿ ಹದಿನೈದು ಜನ ಅಲ್ಲಿಗೆ ಹೋಗಿದ್ದೆವು. ಎಸ್ಟಿ ಸಮುದಾಯದ ಮುಖಂಡರೂ ಬಂದಿದ್ದರು. ಅವರೂ ವಿದದ್ಯಾರ್ಥಿಗಳಿಗೆ ಬೈದು ಬುದ್ಧಿ ಹೇಳಿದ್ದಾರೆ. ಅವರ ಮಾತನ್ನೂ ಕೇಳಿಲ್ಲ. ಡಿಸಿಯವರೂ ಬುದ್ಧಿ ಹೇಳಿದ್ದಾರೆ. ವಿದ್ಯಾರ್ಥಿಗಳ ತಂದೆ ತಾಯಿ ಬರುವರೆಗೆ ಮನೆಗೆ ಕಳುಹಿಸಲು ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಕೀನಾ ಅವರ ಸೂಚನೆ ಮೇಲೆ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರ ಹಾಕಲಾಗಿದೆ. ಈಗ 25 ವಿದ್ಯಾರ್ಥಿಗಳನ್ನು ಹೊರ ಕಳುಹಿಸಲಾಗಿದೆ. ಇನ್ನೂ ಕೆಲವರನ್ನು ಹೊರ ಕಳುಹಿಸಲಾಗುವುದು. ಈ ವಿದ್ಯಾರ್ಥಿಗಳ ತಂದೆ, ತಾಯಿ ಬಂದು ಕ್ಷಮಾಪಣೆ ಪತ್ರ ಕೊಟ್ಟರೆ ಮರಳಿ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ವಾರ್ಡನ್ ಶಿವಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾರ್ಥಿಗಳ ಆರೋಪವೇನು?: ಘಟನೆ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳು, ಈ ಹಿಂದೆ ನಿಲಯ ಪಾಲಕರಿಂದ ಸಮಸ್ಯೆ ಆಗುತ್ತಿದೆ ಅವರನ್ನು ಬದಲಾಯಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಸ್ಟೆಲ್‌ನಲ್ಲಿ ಊಟ ಚೆನ್ನಾಗಿರಲ್ಲ. ಅದನ್ನು ದೂರಿದರೆ ಅದು ಕೂಡಾ ನಮ್ಮದೇ ತಪ್ಪಾಗುತ್ತದೆ. ನಿನ್ನೆ ಚಿಕನ್ ಸಾರು ತಿಂದ ಕೆಲವರು ಇಂದು ಗಂಟಲು ಉರಿಯಾಗುತ್ತಿದೆ ಎಂದು ಹೇಳಿದ್ದಾರೆ. ನಮ್ಮ ಹಾಸ್ಟೆಲ್‌ನಲ್ಲಿ ಹಲವಾರು ಸಮಸ್ಯೆ ಇದೆ. ಬಹಳಷ್ಟು ಬಾರಿ ನಾವು ಸಮಸ್ಯೆಯನ್ನು ಹೇಳಿಕೊಂಡಿದ್ದೇವೆ. ಆದರೆ ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ. ಸಮಸ್ಯೆ ಹೇಳಿಕೊಂಡರೂ ಅದು ನಮ್ಮದೇ ತಪ್ಪಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆಕ್ರೋಶ ಹೊರ ಹಾಕಿದ ಪೋಷಕರು: ನಾವು ಆ ಸಮಯದಲ್ಲಿ ಡಿಸಿ ಮನೆಗೆ ಹೋಗಿದ್ದು ತಪ್ಪು. ಆ ಬಗ್ಗೆ ನಾವು ಕ್ಷಮಾಪಣೆ ಕೇಳುತ್ತೇವೆ. ಈಗ ವಾರ್ಡನ್ ಅವರು ಲಗೇಜು ಸಮೇತ ವಿದ್ಯಾರ್ಥಿಗಳನ್ನು ಹೊರಹಾಕಿದ್ದಾರೆ. ಹಾಸ್ಟೆಲ್‌ನಿಂದ ಹೊರಹಾಕಿರುವ ವಿದ್ಯಾರ್ಥಿಗಳ ಲಿಸ್ಟ್ ಹಿಂತೆಗೆದುಕೊಳ್ಳಬೇಕು ಎಂದು ಪೋಷಕರು ಮನವಿ ಮಾಡಿದರು. ಅಲ್ಲದೆ, ಅಧಿಕಾರಿಗಳ ವರ್ತನೆಗೆ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶಿಕ್ಷಕರ ಪ್ರತಿಭಟನೆ ಬೆಂಬಲಿಸಿ ಹೋರಾಟ.. ಭಾರತೀಯ ಯುವ ಮೋರ್ಚಾ ಕಾರ್ಯಕರ್ತರು ವಶಕ್ಕೆ