ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿಯವರು ಎಲ್ಲೆಲ್ಲಿ ಕೈ ಹಾಕ್ತಾರೆ ಅಲ್ಲೆಲ್ಲಾ ಭಸ್ಮವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.
ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದ ಜಿಡಿಪಿ ಕುಸಿದು ಹೋಗಿದೆ. ಇರುವ ಉದ್ಯೊಗ ಉಳಿದರೆ ಸಾಕಪ್ಪಾ ಎನ್ನುವ ಹಾಗಾಗಿದೆ. ಎಕಾನಮಿ ಹಾಗೂ ಉದ್ಯೋಗಗಳನ್ನು ಭಸ್ಮ ಮಾಡಿದ್ರು. ಎಕಾನಮಿ ಜೊತೆಗೆ ದೇಶದ ಜನರ ಆರೋಗ್ಯವನ್ನೂ ಭಸ್ಮ ಮಾಡಿದ್ದಾರೆ ಎಂದು ದೂರಿದರು.
ರೈತರನ್ನ ಭಸ್ಮ ಮಾಡಿದ್ದಾರೆ. ಎರಡನೇ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದೆ. ಅಂಬಾನಿ-ಆದಾನಿ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಕೇಂದ್ರದ ಆಣತಿಯಂತೆ ರಾಜ್ಯದಲ್ಲಿಯೂ ಭೂ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ನಮ್ಮ ರಾಜ್ಯಕ್ಕೆ 20 ಸಾವಿರ ಕೋಟಿ ರೂ. ಜಿಎಸ್ಟಿ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಸಣ್ಣ ಸಣ್ಣ ರಾಷ್ಟ್ರಗಳೂ ಕೂಡ ತೊಡೆ ತಟ್ಟುತ್ತಿವೆ ಎಂದರು.
ಓದಿ: ಪ್ರಧಾನಿ ಮೋದಿ ದೇಶದ ಭಸ್ಮಾಸುರ: ವಿ.ಎಸ್.ಉಗ್ರಪ್ಪ
ವಿಧಾನ ಪರಿಷತ್ನಲ್ಲಿ ನಡೆದ ಗದ್ದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ವಿಧಾನ ಪರಿಷತ್ಗೆ ಮೂರು ಬಾರಿ ಸದಸ್ಯನಾದವನು. ವಿಧಾನ ಪರಿಷತ್ ಒಂದು ದೇವಾಲಯ. ಅದರ ಘನತೆಗೆ ಮೊನ್ನೆ ಕುಂದುಂಟಾಗಿದೆ. ಇಡೀ ದೇಶದಲ್ಲಿ ಕರ್ನಾಟಕದ ವಿಧಾನ ಪರಿಷತಗ್ಗೆ ಒಳ್ಳೆಯ ಹೆಸರಿದೆ. ಮೊನ್ನೆ ಅದಕ್ಕೆ ಕಪ್ಪು ಚುಕ್ಕೆ ಇಡುವ ಘಟನೆ ನಡೆದಿದೆ ಎಂದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರೂ ಕೂಡ ಆ ರೀತಿ ನಡೆದುಕೊಳ್ಳಬಾರದು. ಇದಕ್ಕೆ ನೇರ ಹೊಣೆ ರಾಜ್ಯ ಸರ್ಕಾರವೇ ಎಂದು ಮಾಜಿ ಸಂಸದ ಉಗ್ರಪ್ಪ ದೂರಿದರು.