ಬಳ್ಳಾರಿ: ಇಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ವಿವಿಯ ಕೇಂದ್ರೀಯ ಗ್ರಂಥಾಲಯ ಹಾಗೂ ಬಹು ಚಟುವಟಿಕಾ ಕೇಂದ್ರಗಳ ಉದ್ಘಾಟನೆ ಹಾಗೂ ಪುತ್ಥಳಿಗಳ ಅನಾವರಣ ಸಮಾರಂಭ ಕಾರ್ಯಕ್ರಮ ನಡೆಯಿತು.
ನಗರದ ಹೊರವಲಯದಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನಾನು ಮತ್ತು ನನ್ನ ಪ್ರಾಣ ಸ್ನೇಹಿತ ಅಬ್ದುಲ್ ಇಬ್ಬರು ಗುಲ್ಬರ್ಗ ವಿಶ್ವವಿದ್ಯಾಲಯ ನಿಲಯದಲ್ಲಿ ಅನುಭವಿಸಿದ ಕಷ್ಟಗಳು ಈ ಭಾಗದ ಮಕ್ಕಳು ಅನುಭವಿಸಬಾರದೆಂಬ ಕಾರಣದಿಂದ ಸಿಎಂ ಬಳಿ ಹೋಗಿ ವಿವಿ ಸ್ಥಾಪನೆಗೆ ಸಹಿ ಹಾಕಿಕೊಂಡು ಬಂದಿದ್ವಿ. ಕೇವಲ ಮೂರೇ ಮೂರು ದಿನಗಳಲ್ಲಿ ವಿವಿಯ ಸ್ಥಾಪನೆಗೆ ಶುರು ಮಾಡಿದ್ದೆವು ಎಂದು ಹಳೆ ನೆನಪುಗಳನ್ನು ಬಿಚ್ಚಿಟ್ಟರು.
ಆಗ ಸಹೋದರ ಜನಾರ್ದನ ರೆಡ್ಡಿ ಪವರ್ ಹಾಗಿತ್ತು. ಅವರು ಫೈಲ್ ನೀಡಿದ್ರೇ ಸಾಕು ಸಿಎಂ ಬಿ.ಎಸ್ ಯಡಿಯೂರಪ್ಪ ಸಹಿ ಹಾಕಿ ಕಳುಹಿಸುತ್ತಿದ್ದರು. ವಿವಿಗೆ ಉತ್ತಮ ಕುಲಪತಿಗಳು ಸಿಕ್ಕಿದ್ದು, ನಾವು ಕಂಡ ಕನಸುಗಳು ನನಸಾಗುತ್ತಿವೆ ಎನ್ನುವ ಭಾವನೆ ಬಂದಿದೆ. ನನಗೆ ಬರುವ ಎಲ್ಲಾ ಫಂಡ್ಗಳನ್ನು ಸಹ ವಿಶ್ವವಿದ್ಯಾಲಯಕ್ಕೆ ನೀಡುವೆ. ಈ ಮೂಲಕ ವಿವಿಯನ್ನು ಅಭಿವೃದ್ಧಿ ಮಾಡುವ ಉದ್ದೇಶ ನಮ್ಮದು ಎಂದು ಶಾಸಕರು ಹೇಳಿದರು.
ಉನ್ನತ ಶಿಕ್ಷಣ ಸಚಿವರಲ್ಲಿ ಶಾಸಕ ಮನವಿ: ಕರ್ನಾಟಕ ರಾಜ್ಯ ಸರ್ಕಾರದಿಂದ 10 ಕೋಟಿ ಅನುದಾನ ನೀಡಿದ್ರೆ ನಾವು 50 ಕೋಟಿ ರೂ ಹಣ ಹಾಕಿ ಅಭಿವೃದ್ಧಿ ಮಾಡುತ್ತೇವೆ. ವಿವಿಯ ಕುಲಪತಿ, ಕುಲಸಚಿವರಲ್ಲಿ ಮನವಿ ಏನೆಂದರೆ ನಮ್ಮ ವಿವಿಯ ವಿದ್ಯಾರ್ಥಿಗಳನ್ನು ಧಾರವಾಡ, ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಹಾಗೆ ತಯಾರು ಮಾಡಬೇಕು. ಇಲ್ಲಿ ಓದಿ ಹೋರ ಬಂದ ವಿದ್ಯಾರ್ಥಿಗಳು ಸೃಜನಾತ್ಮಕವಾಗಿರಬೇಕು ಎಂದು ಸಲಹೆ ನೀಡಿದರು.