ಹೊಸಪೇಟೆ: ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಬಳಿ ಆಶೀರ್ವಾದ ಪಡೆಯಲು ತೆರಳಿದ್ದ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರಿಗೆ ಸ್ವಾಮೀಜಿಯಿಂದ ನೇರ ಪ್ರಶ್ನೆಯೊಂದು ಎದುರಾಯಿತು. ಸ್ವಚ್ಛ ಭಾರತ ಅಂತ ಹೇಳುತ್ತಿದ್ದೀರಿ, ಎಲ್ಲಿದೆ ಸ್ವಚ್ಛತೆ ಎಂದು ಸ್ವಾಮೀಜಿ ಪ್ರಶ್ನೆ ಕೇಳಿದ್ದಾರೆ.
ಇಂದು ತಾಲೂಕಿನ ಐತಿಹಾಸಿಕ ಹಂಪಿ ವಿರುಪಾಕ್ಷ ಹಾಗೂ ಭುವನೇಶ್ವರಿ ದೇವರ ದರ್ಶನ ಪಡೆದು ನಂತರ ಸಚಿವರು ಹಂಪಿಯ ವಿದ್ಯಾರಣ್ಯ ಸ್ವಾಮೀಜಿಯ ಹತ್ತಿರ ಆಶೀರ್ವಾದ ಪಡೆಯಲು ತೆರಳಿದ್ದರು. ಈ ವೇಳೆ ಸಚಿವರಿಗೆ ಆಶೀರ್ವದಿಸಿದ ಸ್ವಾಮೀಜಿ ಅವರು, ಕನ್ನಡದ ಹಿರಿಮೆ ಸಾರುವ ಐತಿಹಾಸಿಕ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ಪ್ರವಾಸಿಗರಿಗೆ ಉಳಿದುಕೊಳ್ಳಲು ಗೃಹಗಳನ್ನು ನಿರ್ಮಿಸಿಕೊಡಬೇಕು. ಇದೇ ವಿಷಯದ ಕುರಿತು ಸಂಸದ ಅನಂತಕುಮಾರ ಹೆಗಡೆ ಅವರಿಗೆ ಹೇಳಿದ್ದೇವೆ. ಎಲ್. ಕೆ ಅಡ್ವಾಣಿಗೆ ತಿಳಿಸಿದ್ದೆವು. ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತಂದಿದ್ದರೂ ಯಾವ ಪ್ರಯೋಜವೂ ಆಗಿಲ್ಲ. ಪ್ರಧಾನಿ ಮೋದಿಯವರ ಗಮನಕ್ಕೆ ತರುವುದಷ್ಟೇ ಬಾಕಿ ಉಳಿದಿದೆ. ನೀವು ಪ್ರವಾಸೋದ್ಯಮ ಸಚಿವರಾಗಿದ್ದೀರಿ ಏನು ಮಾಡ್ತೀರಾ ನೋಡಿ ಎಂದು ಸ್ವಾಮೀಜಿ ಬೇಸರದಿಂದ ನುಡಿದರು.
ತುಂಗಭದ್ರಾ ನದಿ ಪವಿತ್ರವಾದದ್ದು, ಅದನ್ನು ಸ್ವಚ್ಛವಾಗಿ ಕಾಪಾಡಬೇಕಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶೌಚಾಲಯಗಳಿಲ್ಲದೇ, ಅವರೆಲ್ಲ ಬಯಲು ಶೌಚ ಮಾಡುತ್ತಿದ್ದಾರೆ. ಸ್ವಚ್ಛ ಭಾರತ ಅಂತ ಹೇಳುತ್ತೀರಲ್ಲವೇ ಎಲ್ಲದೆ ಸ್ವಚ್ಛತೆಯೆಂದು ಮರುಪ್ರಶ್ನೆ ಹಾಕಿದರು. ನಂತರ ಐತಿಹಾಸಿಕ ಗುರು ಪೀಠದ ಬಗ್ಗೆ ಮಾಹಿತಿಯನ್ನು ನೀಡಿ, ಸಚಿವರಿಗೆ ಆದಷ್ಟು ಬೇಗನೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೊಪ್ಪಿಸಿದ ಸಚಿವ ಸಿ. ಟಿ. ರವಿ ಶೀಘ್ರ ಕೆಲಸ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ರು.